ಸೋಮವಾರಪೇಟೆ,ಮೇ.7: ಕೆಂಚಮ್ಮನಬಾಣೆಯಲ್ಲಿ ಆದಿ ನಾಗಬ್ರಹ್ಮ ಮೊಗ್ಗೇರ್ಕಳ ಯುವಕ ಸಂಘ ಏರ್ಪಡಿಸಿದ್ದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಯು ಗ್ರಾಮದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು.

ಕೆಂಚಮ್ಮನಬಾಣೆಯ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಕಾರ್ಮಿಕ ಮಹಿಳೆಯರಿಗಾಗಿ ಆಯೋಜಿಸಿದ್ದ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ತಂಡೋಪತಂಡವಾಗಿ ಬಹಳಷ್ಟು ಮಹಿಳೆಯರು ತಮ್ಮ ಶಕ್ತಿ ಪ್ರದರ್ಶನ ಮಾಡಿದರಾದರೂ ಅನ್ನಪೂರ್ಣೇಶ್ವರಿ ತಂಡ ಪ್ರಥಮ ಬಹುಮಾನವನ್ನು ಪಡೆದರೆ, ಲಕ್ಷ್ಮಿ ಫ್ರೆಂಡ್ಸ್ ದ್ವಿತೀಯ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡಿತು.

ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾಟದಲ್ಲಿ ನೆರೆಹೊರೆಯ ಗ್ರಾಮದ ಮಕ್ಕಳ ತಂಡಗಳು ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದರಾದರೂ, ಭಾರತ್‍ಮಾತಾ ಸೇವಾ ಸಮಿತಿ ಪ್ರಥಮ ಸರ್ದಾರ್ ಫ್ರೆಂಡ್ಸ್ ದ್ವಿತೀಯ ಬಹುಮಾನ ಪಡೆಯಿತು. ಪಂದ್ಯಾಟದ ಉತ್ತಮ ಹಿಡಿತಗಾರನಾಗಿ ಬಿಎಂಎಸ್‍ಎಸ್ ತಂಡದ ವಿನೋದ್ ಪ್ರಶಸ್ತಿ ಪಡೆದರೆ, ಉತ್ತಮ ಧಾಳಿಗಾರನಾಗಿ ಹೇಮಂತ್ ಬಹುಮಾನ ಪಡೆದರು.

15 ವರ್ಷದೊಳಗಿನ ಬಾಲಕಿಯರ ಓಟದ ಸ್ಪರ್ಧೆಯಲ್ಲಿ ಸಂಚಿತ ಪ್ರಥಮ ಬಹುಮಾನ, ನಿಶ್ಮಿತಾ ದ್ವಿತೀಯ ಸ್ಥಾನ ಪಡೆದರು. ಮಹಿಳೆಯರಿಗಾಗಿ ಆಯೋಜಿಸಿದ್ದ ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಸಂಗೀತಾ ಮಾದೇವ ಪ್ರಥಮ ಹಾಗೂ ಭವಾನಿ ದ್ವಿತೀಯ ಬಹುಮಾನ ಪಡೆದರು.

ಅಂಗನವಾಡಿ ಮಕ್ಕಳಿಗಾಗಿ ಆಯೋಜಿಸಿದ್ದ ಓಟದ ಸ್ಪರ್ಧೆಯ ಗಂಡು ಮಕ್ಕಳ ವಿಭಾಗದಲ್ಲಿ ಬಿಶನ್ ಪ್ರಥಮ, ಉದಯ ದ್ವಿತೀಯ ಹಾಗೂ ಹೆಣ್ಣು ಮಕ್ಕಳ ವಿಭಾಗದಲ್ಲಿ ಯಶಸ್ವಿನಿ ಪ್ರಥಮ, ರೇಷ್ಮಾ ದ್ವಿತೀಯ ಬಹುಮಾನ ಪಡೆದರು. ಕಾಳು ಹೆಕ್ಕುವ ಸ್ಪರ್ಧೆಯ ಹೆಣ್ಣು ಮಕ್ಕಳ ವಿಭಾಗದಲ್ಲಿ ಭುವನ ಪ್ರಥಮ, ದೀಪ್ತಿ ದ್ವಿತೀಯ, ಗಂಡು ಮಕ್ಕಳ ವಿಭಾಗದಲ್ಲಿ ಶೀತಲ್ ಪ್ರಥಮ, ಸಾಗರ್ ದ್ವಿತೀಯ, ಕಪ್ಪೆ ಜಿಗಿತ ಸ್ಪರ್ಧೆಯ ಗಂಡು ಮಕ್ಕಳ ವಿಭಾಗದಲ್ಲಿ ಅಂತೋಣಿ ಪ್ರಥಮ, ದೀಕ್ಷಿತ್ ದ್ವಿತೀಯ, ಹೆಣ್ಣು ಮಕ್ಕಳ ವಿಭಾಗದಲ್ಲಿ ನಿಶ್ಮಿತಾ ಪ್ರಥಮ, ಶಾಂಭವಿ ದ್ವಿತೀಯ ಬಹುಮಾನ ಪಡೆದರು. ಭಕ್ತಿಗೀತೆ ಗಾಯನದಲ್ಲಿ ತೋಳೂರುಶೆಟ್ಟಳ್ಳಿಯ ಅಂಕಿತ ಹಾಗೂ ರಕ್ಷಿತಾ ಬಹುಮಾನ ಪಡೆದರು.

ಸಂಘದ ಅಧ್ಯಕ್ಷ ಕೆ.ಎ. ದಿನೇಶ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತ ಬಿ.ಎ. ಭಾಸ್ಕರ್, ಅಂಗನವಾಡಿ ಕೇಂದ್ರ ಕೆ.ಪಿ. ಜಯಲಲಿತಾ, ಕಬಡ್ಡಿಯಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿರುವ ನವೋದಯ ವಿದ್ಯಾಲಯದ ವಿದ್ಯಾರ್ಥಿನಿ ಕುಸುಬೂರಿನ ರೇಷ್ಮಾ ಮೊಗೇರ, ಬಾಸ್ಕೆಟ್ ಬಾಲ್ ಹಾಗೂ ಕಬಡ್ಡಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ರಾಜ್ಯ ತಂಡದ ನಾಯಕ ಚಿಕ್ಕತೋಳೂರಿನ ಕೀರ್ತಿ ಪ್ರಸಾದ್ ಹಾಗೂ ತಾಲೂಕಿನ ಮಹಿಳಾ ಆಟೋ ಚಾಲಕಿ ಸುಂಟಿಕೊಪ್ಪದ ಪ್ರಮೀಳಾರವರುಗಳನ್ನು ಗೌರವಿಸಲಾಯಿತು.

ಸಮಾರಂಭದಲ್ಲಿ ಅತಿಥಿಗಳಾಗಿ ರಾಜ್ಯ ಕಾಂಗ್ರೆಸ್ ಕಾರ್ಮಿಕ ಘಟಕದ ಪೂಣಚ್ಚ, ಸೋಮವಾರಪೇಟೆಯ ಸೃಷ್ಠಿಯ ಚಿಗುರು ಸಾಹಿತ್ಯ ಘಟಕದ ಅಧ್ಯಕ್ಷ ಸುದರ್ಶನ್, ಹಳ್ಳದಿಣ್ಣೆಯ ಮುನೇಶ್ವರ ಸೇವಾ ಸಮಿತಿಯ ಪ್ರ. ಕಾರ್ಯದರ್ಶಿ ಪಿ.ಸಿ. ಸುಂದರ್, ಆರ್‍ಎಂಸಿ ಸದಸ್ಯೆ ಚಂದ್ರಿಕಾ ಕುಮಾರ್, ಗ್ರಾಮದ ಪ್ರಮುಖರುಗಳಾದ ಬಿ.ಸಿ. ವಸಂತ ಪೂಜಾರಿ, ಕೆ.ಆರ್. ರಮೇಶ್, ಬಿ.ಕೆ. ರಘು, ಮೊಗೇರ ಸೇವಾ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಮುತ್ತಮ್ಮ ರಮೇಶ್, ತೋಳೂರುಶೆಟ್ಟಳ್ಳಿ ಮೊಗೇರ ಯುವಕ ಸಂಘದ ಕಾರ್ಯದರ್ಶಿ ಶಿವಪ್ಪ ಉಪಸ್ಥಿತರಿದ್ದರು.