ಮಡಿಕೇರಿ, ಮೇ 8: ಎರಡು ಮಕ್ಕಳ ತಂದೆಯಾಗಿರುವ ಆಟೋ ಚಾಲಕನೊಬ್ಬ ಅಪ್ರಾಪ್ತ ಯುವತಿಯೊಬ್ಬಳನ್ನು ಪುಸಲಾಯಿಸಿ ಸುಳ್ಯಕ್ಕೆ ಕರೆದೊಯ್ದಿದ್ದ ವೇಳೆ ಸೆರೆಸಿಕ್ಕಿ ‘ಪೋಕ್ಸೊ’ ಕಾಯ್ದೆಯಡಿ ಜೈಲು ಸೇರಿದ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ತ್ಯಾಗರಾಜ ಕಾಲೋನಿ ನಿವಾಸಿ, ಮಹಮ್ಮದ್ ಗೌಸ್ ಎಂಬವರ ಪುತ್ರ ವಾಝಿದ್ (24) ಎಂಬಾತ, ಹೆಬ್ಬೆಟ್ಟಗೇರಿಯ ಪರಿಶಿಷ್ಟ ಕುಟುಂಬವೊಂದರ ಹದಿನೇಳರ ಪ್ರಾಯದ ಯುವತಿಯನ್ನು ತಾ. 2 ರಂದು ಭಾನುವಾರ ತನ್ನ ಆಟೋ ರಿಕ್ಷಾದಲ್ಲಿ (ಕೆ.ಎ. 12 ಬಿ. 4304) ಸುಳ್ಯಕ್ಕೆ ಕರೆದೊಯ್ದಿದ್ದಾನೆ.

ಅಲ್ಲಿನ ಗ್ಯಾರೇಜೊಂದರಲ್ಲಿ ರಿಕ್ಷಾವನ್ನು ಬಿಟ್ಟು ಯುವತಿಯನ್ನು ಹೊಟೇಲ್‍ಗೆ ಕರೆದೊಯ್ದು ತಿಂಡಿ ತಿನ್ನಿಸಿ ಸುಳ್ಯದ ಮಾರ್ಗದಲ್ಲಿ ಸಂಶಯಾಸ್ಪದ ರೀತಿ ಸುಳಿದಾಡುತ್ತಿದ್ದ ವೇಳೆ ಸಾರ್ವಜನಿಕರು ಗಮನಿಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಈ ವೇಳೆ ಕಾರ್ಯ ಪ್ರವೃತ್ತರಾದ ಸುಳ್ಯ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿ, ಆಟೋ ಚಾಲಕನ ಸಹಿತ ಯುವತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಹೆಬ್ಬೆಟ್ಟಗೇರಿಯಿಂದ ನಿತ್ಯ ಮಡಿಕೇರಿಯಲ್ಲಿ ಹೊಲಿಗೆ ತರಬೇತಿಗೆ ಬರುತ್ತಿದ್ದ ಈ ಅಪ್ರಾಪ್ತಳನ್ನು ಪರಿಚಯಿಸಿಕೊಂಡ ಆಟೋ ಚಾಲಕ ಆಕೆಯನ್ನು ಪುಸಲಾಯಿಸಿ ಕರೆದೊಯ್ದಿದ್ದು, ದೃಢಪಟ್ಟಿದೆ.

ಕೂಡಲೇ ಮಡಿಕೇರಿ ಗ್ರಾಮಾಂತರ ಪೊಲೀಸರನ್ನು ಸಂಪರ್ಕಿಸಿ ಆರೋಪಿಯನ್ನು ‘ಪೋಕ್ಸೊ’ ಕಾಯ್ದೆಯಡಿ ಮೊಕದ್ದಮೆಯೊಂದಿಗೆ ಬಂಧಿಸಲು ನಿರ್ದೇಶಿಸಿರುವ ಅಲ್ಲಿನ ಠಾಣಾಧಿಕಾರಿ ಚಂದ್ರಶೇಖರ್, ಯುವತಿಯ ಪೋಷಕರನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಹೆತ್ತವರ ವಶಕ್ಕೆ ಆಕೆಯನ್ನು ಒಪ್ಪಿಸಿದ್ದಾರೆ.

ಮಡಿಕೇರಿ ಗ್ರಾಮಾಂತರ ಪೊಲೀಸರು ಆಟೋ ಚಾಲಕನನ್ನು ‘ಪೋಕ್ಸೊ’ ಕಾಯ್ದೆಯಡಿ ವಶಕ್ಕೆ ಪಡೆದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ, ಆತನನ್ನು ನ್ಯಾಯಾಂಗ ವಶಕ್ಕೆ ಒಳಪಡಿಸಲಾಗಿದೆ.