ಗೋಣಿಕೊಪ್ಪಲು, ಮೇ 8: ಹಾತೂರು ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಮೈದಾನದಲ್ಲಿ ಮೂರು ದಿನಗಳ ಕಾಲ ಅಮ್ಮಕೊಡವ ಸಮಾಜ ಸಹಯೋಗದಲ್ಲಿ ನಡೆದ ಮನ್ನಕಮನೆ ಕ್ರಿಕೆಟ್ ಕಪ್‍ನ್ನು ಪುತ್ತಮನೆ ತಂಡ ಗೆದ್ದುಕೊಳ್ಳುವ ಮೂಲಕ ಚಾಂಪಿಯನ್ ಪಟ್ಟ ಉಳಿಸಿಕೊಂಡಿದೆ.ಫೈನಲ್‍ನಲ್ಲಿ ಸೋಲನುಭವಿಸಿದ ಅಮ್ಮತ್ತೀರ ರನ್ನರ್ ಅಪ್‍ಗೆ ತೃಪ್ತಿ ಪಟ್ಟುಕೊಂಡಿದೆ. ಪುತ್ತಮನೆ ತಂಡವು 8 ರನ್‍ಗಳಿಂದ ಕಪ್ ಗೆದ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಪುತ್ತಮನೆ 8 ಓವರ್‍ಗಳಲ್ಲಿ 7 ವಿಕೆಟ್ ಕಳೆದುಕೊಂಡು 68 ರನ್ ದಾಖಲಿಸಿತು. ಅಮ್ಮತ್ತೀರ ತಂಡವು 69 ರನ್‍ಗಳ ಗುರಿ ಬೆನ್ನತ್ತಿ ಬ್ಯಾಟಿಂಗ್ ಆರಂಭಿಸಿತು. ಪುತ್ತಮನೆ ತಂಡದ ಬಿಗಿ ಬೌಲಿಂಗ್ ಧಾಳಿಯಿಂದಾಗಿ ರನ್ ಗಳಿಸಲು ಪರದಾಡಿತು. ಕೊನೆಯ ಓವರ್‍ನಲ್ಲಿ 16 ರನ್ ಬೇಕಿದ್ದಾಗ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ 8 ರನ್‍ಗಳಿಂದ ಸೋಲನುಭವಿಸಿತು.

ಸೆಮಿ ಫೈನಲ್‍ನಲ್ಲಿ ಪುತ್ತಮನೆ ತಂಡವು ಆಂಡಮಾಡ ವಿರುದ್ಧ ರೋಚಕ ಗೆಲುವು ದಾಖಲಿಸಿ ಫೈನಲ್‍ಗೆ ಪ್ರÀವೇಶ ಪಡೆಯಿತು. ಪುತ್ತಮನೆ 6 ವಿಕೆಟ್‍ಗೆ 58, ಆಂಡಮಾಡ 7 ವಿಕೆಟ್ 53 ರನ್ ದಾಖಲಿಸಿತು.

ಮತ್ತೊಂದು ಸೆಮಿಯಲ್ಲಿ ಆತಿಥೇಯ ಮನ್ನಕಮನೆ ವಿರುದ್ಧ ಅಮ್ಮತ್ತೀರ ಗೆಲುವು ಪಡೆಯಿತು. ಮನ್ನಕಮನೆ 57 ರನ್, ಅಮ್ಮತ್ತೀರ 58 ರನ್ ಬಾರಿಸಿತು. ಮನ್ನಕಮನೆ ಕೃಪ ಹ್ಯಾಟ್ರಿಕ್ ವಿಕೆಟ್ ಹೊರತಾಗಿಯೂ ಪಂದ್ಯ ಕೈಚೆಲ್ಲಿಕೊಂಡರು.

ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗುಂಭೀರ ಯತೀಶ್ ಪಡೆದುಕೊಂಡರು. ಉತ್ತಮ ಬೌಲರ್ ಪ್ರಶಸ್ತಿಯನ್ನು ಮನ್ನಕಮನೆ ಕೃಪ, ಉತ್ತಮ ಬ್ಯಾಟ್ಸ್‍ಮನ್ ಪ್ರಶಸ್ತಿಯನ್ನು ಶ್ರೀಪ್ರಸಾದ್, ಪುತ್ತಮನೆ ಭವಿಷ್ಯದ ಆಟಗಾರನಾಗಿ ಚಿಲ್ಲಜಮ್ಮಂಡ ಶರತ್, ಭವಿಷ್ಯದ ತಂಡವಾಗಿ ಆಂಡಮಾಡ, ಉತ್ತಮ ತಂಡವಾಗಿ ಕೊಂಡಿಜಮ್ಮನ ತಂಡ ಪಡೆದುಕೊಂಡಿತು.

ಪೈಪೋಟಿ : ವಾಲಗತ್ತಾಟ್‍ನ ಮಕ್ಕಳ ವಿಭಾಗದಲ್ಲಿ ರಿಯಾ (ಪ್ರಥಮ), ಬಾಚಮಡ ಶೈನಿ (ದ್ವಿತೀಯ), ಹೆಮ್ಮಚ್ಚಿಮನೆ ಲಹರಿ (ತೃತೀಯ), ಪುರುಷರಲ್ಲಿ ಜಿತಿನ್, ನಾಳಿಯಮ್ಮಂಡ ಯತೀಶ್, ನೆರೆಯಮ್ಮಂಡ ಪ್ರಬು, ಮಹಿಳೆಯರಲ್ಲಿ ನಾಳಿಯಮ್ಮಂಡ ವೀಣಾ, ಪುತ್ತಮನೆ ವಿದ್ಯಾ, ಬಾನಂಡ ಆಶಾ, ಬಹುಮಾನ ಪಡೆದುಕೊಂಡರು.

ಸಮಾರೋಪ: ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿ ಪಾಲ್ಗೊಂಡು ಮಾತನಾಡಿ, ಕೊಡಗಿನ ಆಚಾರ-ವಿಚಾರ ರಕ್ಷಣೆಗೆ ಕ್ರೀಡಾಕೂಟ ಸಹಕಾರಿಯಾಗುತ್ತಿದೆ. ರಾಜಕೀಯ ರಹಿತವಾಗಿ ಇಂತಹ ಕೌಟುಂಬಿಕ ಕ್ರೀಡೆ ನಡೆಯಬೇಕು. ಕ್ರೀಡೆಗೆ ಪೋಷಕರು ಪ್ರೋತ್ಸಾಹ ಕೊಡಲು ಹಿಂದೇಟು ಹಾಕಬಾರದು. ಅಮ್ಮಕೊಡವ ಸಮಾಜಕ್ಕೆ ರೂ. 5 ಲಕ್ಷ ಅನುದಾನ ನೀಡುವದಾಗಿ ಹೇಳಿದರು.

ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರಥ್ಯು ಮಾತನಾಡಿ, ಕೊಡಗಿನ ರಕ್ಷಣೆಗೆ ನಾವೆಲ್ಲಾ ಮುಂದಾಗಬೇಕಿದೆ. ನವು ಒಗ್ಗೂಡುವ ಮೂಲಕ ಸಮಾಜದ ರಕ್ಷಣೆಗೆ ಮುಂದಾಗಬೇಕು. ಪ್ರೋತ್ಸಾಹ ನೀಡುವ ಮೂಲಕ ನಮ್ಮ ಸಮಾಜಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.

ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಮನ್ನಕಮನೆ ಕ್ರಿಕೆಟ್ ಸಮಿತಿ ಅಧ್ಯಕ್ಷ ಮನ್ನಕಮನೆ ಕೆ. ರವಿ, ತಾ.ಪಂ. ಸದಸ್ಯ ನೆರೆಯಂಡಮ್ಮಂಡ ಉಮಾಪ್ರಭು, ಕಾಫಿ ಬೆಳೆಗಾರರುಗಳಾದ ಚೊಟ್ಟೋಳಿಯಮ್ಮಂಡ ಮೋಹನ್, ಈಶ್ವರ, ಎಂ.ಎನ್. ಕೃಷ್ಣ ಎಂ.ಕೆ. ಕೃಷ್ಣ, ರಾಧ ಕೃಷ್ಣಮ್ಮಯ್ಯ, ಸಮಜ ಕಾರ್ಯದರ್ಶಿ ಮನ್ನಕಮನೆ ಬಾಲಕೃಷ್ಣ ಹಾಗೂ ಬಾನಂಡ ರಮೇಶ್ ಉಪಸ್ಥಿತರಿದ್ದರು.

ಮುಂದಿನ ವರ್ಷದ ಅಮ್ಮಕೊಡವ ಕ್ರಿಕೆಟ್ ಕಪ್ ಆತಿಥ್ಯವನ್ನು ಪುತ್ತಮನೆ ಕುಟುಂಬ ವಹಿಸಿಕೊಂಡಿರುವ ಬಗ್ಗೆ ಸಮಾರೋಪದಲ್ಲಿ ಪ್ರಕಟಿಸಲಾಯಿತು. ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ಮೈದಾನದಲ್ಲಿ ನಡೆಸುವ ಬಗ್ಗೆ ಘೋಷಿಸಲಾಯಿತು.