ಸೋಮವಾರಪೇಟೆ, ಮೇ 8: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೂಲಕ ರೂ. 72 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಕಾಂಕ್ರೀಟ್ ಆವರಣ ಹಾಗೂ ಶೌಚಾಲಯ ಕಾಮಗಾರಿಗಳನ್ನು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಪರಿಶೀಲಿಸಿದರು. ಕಳೆದ ಹಲವು ದಶಕಗಳ ಬೇಡಿಕೆಯಾಗಿದ್ದ ಬಸ್‍ನಿಲ್ದಾಣ ಆವರಣ ಕಾಂಕ್ರೀಟೀಕರಣಕ್ಕೆ ನಿಗಮದಿಂದ ರೂ. 72 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಯಾವದೇ ಕಾರಣಕ್ಕೂ ಕಳಪೆಯಾಗದಂತೆ ನಿಗಾ ವಹಿಸಬೇಕು. ತಪ್ಪಿದಲ್ಲಿ ಕ್ರಮಕೈಗೊಳ್ಳಲಾಗುವದು ಎಂದು ಗುತ್ತಿಗೆದಾರರ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ಕಾಂಕ್ರೀಟ್ ಆವರಣಕ್ಕೆ ಬಳಸಲಾಗುತ್ತಿರುವ ವೆಟ್‍ಮಿಕ್ಸ್, ಕಬ್ಬಿಣದ ರಾಡ್, ಸಿಮೆಂಟ್‍ಗಳನ್ನು ಪರಿಶೀಲಿಸಿದ ಶಾಸಕರು, ಕೆಲವೆಡೆ ಆವರಣ ಅಗೆದು ಎಷ್ಟು ಪ್ರಮಾಣದಲ್ಲಿ ವೆಟ್‍ಮಿಕ್ಸ್ ಹಾಕಲಾಗಿದೆ ಎಂಬದನ್ನು ಮನವರಿಕೆ ಮಾಡಿಕೊಂಡರು.

ಅಗತ್ಯವಿರುವ ಕಾರ್ಮಿಕರು ಹಾಗೂ ಯಂತ್ರೋಪಕರಣಗಳನ್ನು ಬಳಸಿಕೊಂಡು ಉದ್ದೇಶಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಇನ್ನೇನು ಮಳೆಗಾಲ ಪ್ರಾರಂಭವಾಗಲಿದ್ದು, ಮುಂದಿನ 15ದಿನದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ನಿರ್ದೇಶನ ನೀಡಿದರು.

ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವ ಉದ್ದೇಶದಿಂದ ಸಾರ್ವ ಜನಿಕರೂ ಸಹ ಗಮನಹರಿಸಬೇಕು. ಸರ್ಕಾರದ ಅನುದಾನ ಎಂದು ಸಾರ್ವಜನಿಕರು ನಿರ್ಲಕ್ಷ್ಯವಹಿಸಬಾರದು ಎಂದು ಇದೇ ಸಂದರ್ಭ ಶಾಸಕರು, ಸ್ಥಳದಲ್ಲಿದ್ದವರಿಗೆ ಕಿವಿಮಾತು ಹೇಳಿದರು.

ಈ ಸಂದರ್ಭ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ, ಪ್ರಮುಖರಾದ ಸಿ.ಡಿ. ನೆಹರು, ಸಂಚಾರಿ ನಿಯಂತ್ರಣಾಧಿಕಾರಿ ಕಾರ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು.