ಕೂಡಿಗೆ, ಮೇ 8: ದಿಡ್ಡಳ್ಳಿಯಲ್ಲೇ ವಾಸವಾಗಿದ್ದ ಆದಿವಾಸಿಗಳಿಗೆ ಅಲ್ಲಿಯೇ ಮೂಲಭೂತ ಸೌಲಭ್ಯವನ್ನು ಕಲ್ಪಿಸುತ್ತೇವೆ, ಬೇರೆಡೆಗೆ ಸ್ಥಳಾಂತರ ಮಾಡದೆ ಅಕ್ಕಪಕ್ಕದಲ್ಲಿ ಭೂಮಿಯನ್ನು ಖರೀದಿಸಿ ನಿವಾಸಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗುವದು ಎಂದು ಹೇಳುತ್ತಾ ಇದೀಗ ಕಳೆದ ಮೂರು ದಿನಗಳಿಂದ ರಾಕ್ಷಸರಂತೆ ದಿಡ್ಡಳ್ಳಿ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಆದಿವಾಸಿಗಳಿಗೆ ಮನಬಂದಂತೆ ಥಳಿಸುವದರ ಮೂಲಕ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಆದಿವಾಸಿಗಳನ್ನು ಅಲ್ಲಿಂದ ತೆರವುಗೊಳಿಸಿರುವದು ಸರಿಯಾದ ಕ್ರಮವಲ್ಲ. ಅವರುಗಳಿಗೆ ಅದೇ ಜಾಗದಲ್ಲಿ ನಿವೇಶನದ ವ್ಯವಸ್ಥೆ ಮಾಡಿಕೊಡಬೇಕೆಂದು ಅಪ್ಪಚ್ಚುರಂಜನ್ ಆಗ್ರಹಿಸಿದ್ದಾರೆ.

ಇಂದು ಕೂಡಿಗೆ ಗ್ರಾ.ಪಂ ವ್ಯಾಪ್ತಿಯಲ್ಲಿ ಬ್ಯಾಡಗೊಟ್ಟ ಗ್ರಾಮಕ್ಕೆ ಭೇಟಿ ನೀಡಿ, ದಿಡ್ಡಳ್ಳಿ ನಿರಾಶ್ರಿತರ ಸ್ಥಿತಿ ವೀಕ್ಷಿಸಿದ ರಂಜನ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜಿಲ್ಲಾಡಳಿತಕ್ಕೆ ಮಾನವೀಯತೆ ಇಲ್ಲದೆ, ನಿರಾಶ್ರಿತರನ್ನು ಕುರಿಗಳಂತೆ ತುಂಬಿಸಿಕೊಂಡುಬಂದು ಬ್ಯಾಡಗೊಟ್ಟ ಗ್ರಾಮದಲ್ಲಿ ಯಾವದೇ ಪೂರ್ವ ವ್ಯವಸ್ಥೆಗಳಾಗದೆ ಸುಳ್ಳು ಭರವಸೆಗಳನ್ನು ನೀಡಿ ಕರೆತಂದು ಪ್ರಾಣಿಗಳಿಗಿಂತಲು ಕಡೆಯಾಗಿ, ಕಡೆಗಣಿಸಿರುವದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದರು.

ಕಂದಾಯ ಸಚಿವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ದಿಡ್ಡಳ್ಳಿ ನಿರಾಶ್ರಿತರಿಗೆ ಸುಳ್ಳು ಭರವಸೆಗಳನ್ನು ನೀಡಿ ತೆರಳಿರುವದು ರಾಜ್ಯ ಸರ್ಕಾರಕ್ಕೆ ಶೋಭೆತರುವ ವಿಚಾರವಲ್ಲ. ಜಿಲ್ಲೆಯಲ್ಲಿರುವ 1500 ಎಕರೆ ಜಾಗವು ಅರಣ್ಯ ಇಲಾಖೆಗೆ ಸೇರಿದ ಲ್ಯಾಂಡ್ ಬ್ಯಾಂಕ್ ಜಾಗವಾಗಿದ್ದು, ಇದರ ಜವಾಬ್ದಾರಿಯನ್ನು ಅರಣ್ಯ ಇಲಾಖೆ ನಿರ್ವಹಿಸುತ್ತಿದ್ದು, ಅರಣ್ಯ ಇಲಾಖೆಯಿಂದ ಇದನ್ನು ವಾಪಸ್ ಪಡೆದು ಮಾನವೀಯತೆಯಿಂದ ನಿರಾಶ್ರಿತರಿಗೆ ಈ ಜಾಗದಲ್ಲೆ ವ್ಯವಸ್ಥೆ ಮಾಡಿಕೊಡಬಹುದು ಎಂದು ಅಪ್ಪಚ್ಚುರಂಜನ್ ಅಭಿಪ್ರಾಯಪಟ್ಟರು.

ಈ ಸಂದರ್ಭ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಣಿಪ್ರಸಾದ್, ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಕುಮಾರ್, ಸದಸ್ಯ ಕೆ.ಟಿ. ಈರಯ್ಯ, ಕೂಡುಮಂಗಳೂರು ಗ್ರಾ.ಪಂ. ಸದಸ್ಯ ಬಾಸ್ಕರ್ ನಾಯಕ್, ಕೂಡುಮಂಗಳೂರು ಬ್ಲಾಕ್ ಬಿಜೆಪಿ ಅಧ್ಯಕ್ಷ ಮಂಜುನಾಥ್, ಬಿಜೆಪಿ ನಗರ ಅಧ್ಯಕ್ಷ ಕೆ.ಜಿ. ಮನು, ಬಿಜೆಪಿ ಪ್ರಮುಖರಾದ ನಿಡ್ಯಮಲೆ ದಿನೇಶ್ ಇತರರು ಇದ್ದರು.