ಗೋಣಿಕೊಪ್ಪಲು, ಮೇ 8 : ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ಮೈದಾನಗಳಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಅಳಮೇಂಗಡ ಕ್ರಿಕೆಟ್ ಕಪ್ ಪಂದ್ಯಗಳಲ್ಲಿ ಕೊಟ್ಟಂಗಡ, ಹೊದವಾಡ ಚೌರೀರ, ಕೆದಮುಳ್ಳೂರು ಮಾಳೇಟಿರ, ಬಲ್ಲಂಡ ಹಾಗೂ ಚಂಗುಲಂಡ ತಂಡಗಳು ಗೆಲುವು ದಾಖಲಿಸಿವೆ.

ಹೊದವಾಡ ಚೌರೀರ ತಂಡವು ಕೋಟ್ರಮಾಡ ತಂಡವನ್ನು 9 ವಿಕೆಟ್‍ಗಳಿಂದ ಸೋಲಿಸಿತು. ಕೋಟ್ರಮಾಡ ಮೊದಲು ಬ್ಯಾಟ್ ಮಾಡಿ 8 ವಿಕೆಟ್‍ಗೆ 38 ರನ್ ಬಾರಿಸಿತು. ಚೌರೀರ 4.1 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 41 ರನ್ ಬಾರಿಸಿ ಗೆಲುವು ಪಡೆದುಕೊಂಡಿತು.

ಕೊಟ್ಟಂಗಡ ತಂಡ ಚೋಡುಮಾಡವನ್ನು 4 ವಿಕೆಟ್‍ಗಳಿಂದ ಮಣಿಸಿತು. ಚೋಡುಮಾಡ 3 ವಿಕೆಟ್‍ಗೆ 52 ರನ್ ಗಳಿಸಿತು. ಕೊಟ್ಟಂಗಡ 6 ವಿಕೆಟ್ ಕಳೆದುಕೊಂಡು 1 ಚೆಂಡು ಉಳಿದಿರುವಂತೆ ಗೆಲುವಿನ ನಗೆ ಬೀರಿತು.

ಕೆದಮುಳ್ಳೂರು ಮಾಳೇಟಿರ ತಂಡವು ಕೋಟ್ರಂಗಡ ವಿರುದ್ಧ 18 ರನ್‍ಗಳಿಂದ ಜಯ ಸಾಧಿಸಿತು. ಮಾಳೇಟಿರ 4 ವಿಕೆಟ್ ನಷ್ಟಕ್ಕೆ 80 ರನ್ ಗುರಿ ನೀಡಿತು. ಕೋಟ್ರಂಗಡ 7 ವಿಕೆಟ್ ಕಳೆದುಕೊಂಡು 61 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಬಲ್ಲಂಡ ತಂಡವು ಪುಲಿಕೋಟ್ ಮುಕ್ಕಾಟೀರ ತಂಡದ ವಿರುದ್ಧ 4 ರನ್ ಗೆಲುವು ಪಡೆಯಿತು. ಬಲ್ಲಂಡ 5 ವಿಕೆಟ್‍ಗೆ 51 ರನ್, ಮುಕ್ಕಾಟೀರ 8 ವಿಕೆಟ್‍ಗೆ 47 ರನ್ ದಾಖಲಿಸಿತು.

ಚಂಗುಲಂಡ ತಂಡ ಬದಲೇರ ತಂಡವನ್ನು 28 ರನ್‍ಗಳಿಂದ ಮಣಿಸಿತು. ಚಂಗುಲಂಡ 2 ವಿಕೆಟ್‍ಗೆ 69 ರನ್, ಬದಲೇರ 7 ವಿಕೆಟ್‍ಗೆ 41 ರನ್ ದಾಖಲಿಸಿತು.

ಕೋಟ್ರಂಗಡ ನಿತೇಶ್, ಪುಲಿಕೋಟ್ ಮುಕ್ಕಾಟೀರ ರೇಗನ್, ಕೋಟ್ರಮಾಡ ನಿತಿನ್, ಚೋಡುಮಾಡ ನಿಶಾಂತ್, ಹಾಗೂ ಬದಲೇರ ರಾಜೇಶ್ ಪಂದ್ಯ ಪುರುಷ ಪ್ರಶಸ್ತಿ ಪಡೆದುಕೊಂಡರು.