ಮಡಿಕೇರಿ, ಮೇ 8: ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಭಾರತೀಯ ಕಿಸಾನ್ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕಂದಾಯ ಇಲಾಖೆಯಲ್ಲಿ ವಿಲೇವಾರಿ ಆಗದೆ ಉಳಿದಿರುವ ಕಡತಗಳ ವಿಲೇವಾರಿ ನಾಪತ್ತೆಯಾದ ಕಡತಗಳ ಬಗ್ಗೆ ತನಿಖೆಗೆ ಒಳಪಡಿಸುವದು, ಎಲ್ಲಾ ಕೇಂದ್ರಗಳಲ್ಲಿ ಆರ್‍ಟಿಸಿ ದೊರಕುವಂತೆ ಮಾಡುವದು, ಇಲಾಖೆಯಲ್ಲಿ ಏಜೆಂಟರುಗಳ ಹಾವಳಿ ತಪ್ಪಿಸುವದು, ತಾಲೂಕು ಕೇಂದ್ರಗಳಲ್ಲಿ ಎಡಿಎಲ್‍ಆರ್ ಡಿಟಿಎಲ್‍ಆರ್‍ಆರ್ ಅವರುಗಳು ನೇಮಕಾತಿ ಮಾಡುವದು ಸೇರಿದಂತೆ ಪ್ರತಿ 3 ತಿಂಗಳಿಗೊಮ್ಮೆ ತಾಲೂಕು ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ ಅದಾಲತ್ ಸಭೆ ನಡೆಸುವಂತೆ ಮನವಿ ಸಲ್ಲಿಸಲಾಗಿದೆ.

ಮುಂದಿನ ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಹೋರಾಟ ಮಾಡುವದಾಗಿ ಮನವಿಯಲ್ಲಿ ಉಲ್ಲೇಖವಾಗಿದೆ. ಸ್ಪಂದಿಸಿದ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭ ಕಿಸಾನ್ ಸಂಘದ ಅಧ್ಯಕ್ಷ ರಾಜೀವ್ ಬೋಪಯ್ಯ, ತಾಲೂಕು ಅಧ್ಯಕ್ಷ ಪ್ರವೀಣ್ ಭೀಮಯ್ಯ, ಜಿಲ್ಲಾ ಪ್ರಮುಖ್ ಮಲ್ಲಮಾಡ ಪ್ರಭು ಪೂಣಚ್ಚ, ಸದಸ್ಯ ಕೋಟೇರ ಕಿಶನ್ ಮುತ್ತಪ್ಪ ಇದ್ದರು.