ಮಡಿಕೇರಿ, ಮೇ 8: ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೊಡಗಿನ ಬಹುತೇಕ ಕಡೆಗಳಲ್ಲಿ ಇತ್ತೀಚೆಗೆ ಹೊತ್ತಲ್ಲದ ಹೊತ್ತಿಗೆ ಮಳೆಯಾಗುವದು ಸಾಮಾನ್ಯವಾಗಿದೆ. ಕೇವಲ ಮಳೆ ಆದರೂ ಕೊಡಗಿನ ಜನತೆ ತಲೆಕೆಡಿಸಿಕೊಳ್ಳುವದಿಲ್ಲ. ಏಕೆಂದರೆ ಕರ್ನಾಟಕದ ಕಾಶ್ಮೀರ ಎಂದು ಕರೆಯಲ್ಪಡುವ ಕೊಡಗಿನಲ್ಲಿ ಮಳೆಯ ಆರ್ಭಟ ಪ್ರತಿ ವರ್ಷ ಇರುತ್ತದೆ. ಆದರೆ ಕಾಡುತ್ತಿರುವದು ಗುಡುಗು-ಮಿಂಚು!ಇಲ್ಲಿನ ಜನರನ್ನು ನಿದ್ದೆಗೆಡುವಂತೆ ಮಾಡುತ್ತಿರುವದು ಸಿಡಿಲು ಮಿಂಚಿನ ಆರ್ಭಟ... ಹೌದು ಧೋ... ಎಂದು ಮಳೆ ಸುರಿಯುತ್ತಿದ್ದರೂ ‘ಕ್ಯಾರೆ’ ಎನ್ನದೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಕೊಡಗಿನ ಜನತೆಯನ್ನು ಇತ್ತೀಚೆಗೆ ಬರುವ ಸಿಡಿಲು ಮಿಂಚು ಬೆಚ್ಚಿ ಬೀಳುವಂತೆ ಮಾಡುತ್ತಿದೆ. ಮಳೆಯೊಂದಿಗೆ ಒಮ್ಮೆಗೆ ಕಿವಿಗಡಚಿಕ್ಕುವ ರೀತಿಯಲ್ಲಿ

(ಮೊದಲ ಪುಟದಿಂದ) ಬರುವ ಸಿಡಿಲು ಎದೆ ಝಲ್ ಎನ್ನುವಂತೆ ಮಾಡುತ್ತದೆ. ಇದರೊಂದಿಗೆ ಬೆಂಕಿ ಕೆಂಡದ ರೀತಿಯಲ್ಲಿ ಕಾಣಿಸಿಕೊಳ್ಳುವ ಮಿಂಚು ಮತ್ತಷ್ಟು ಭಯ ಮೂಡಿಸುತ್ತಿದೆ.

ಏಕೆ ಹೀಗೆ...?

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರಾದ ಡಾ. ಶ್ರೀನಿವಾಸ್ ರೆಡ್ಡಿ ಅವರ ಪ್ರಕಾರ ಕೊಡಗಿನ ಪ್ರಸ್ತುತ ಮುಂಗಾರು ಪೂರ್ವ ಮಳೆ ಸುರಿಯುತ್ತಿದೆಯಾದರೂ ಈ ವೇಳೆ ಗುಡುಗು-ಮಿಂಚಿನ ಆರ್ಭಟ ಸರ್ವೆ ಸಾಮಾನ್ಯ. ಆದರೆ ಈ ಬಾರಿ ಇದರಲ್ಲಿ ಕೊಂಚ ಬದಲಾವಣೆಯಿದ್ದು, ಗುಡುಗು-ಮಿಂಚಿನ ಆರ್ಭಟ ಹೆಚ್ಚಾಗಿದೆ. ಇದಕ್ಕೆ ಕಾರಣವೇನೆಂದರೆ ಬಿಸಿಲಿನ ತಾಪ!

ಹೌದು ಮುಂಗಾರು ಪೂರ್ವ ಮಳೆ ಪ್ರತಿವರ್ಷ ಸುರಿಯುವಾಗಲೂ ವಾತಾವರಣ ಮಾಮೂಲಿಯಂತಿರುತ್ತದೆ. ಆದರೆ ಈ ಬಾರಿ ಹಾಗಿಲ್ಲ. ಕೊಡಗು ಸೇರಿದಂತೆ ಹಲವೆಡೆ ಬಿಸಿಲಿನ ಬೇಗೆ ಮಿತಿ ಮೀರಿದೆ. ದಿನೇ ದಿನೆ ಉರಿ ಹೆಚ್ಚಾಗುತ್ತಿದ್ದು, ತಾಪಮಾನ ಮಿತಿ ಮೀರಿದೆ. ಇದರಿಂದಾಗಿ ಹವಾಮಾನ ವೈಪರೀತ್ಯ ಉಂಟಾಗುತ್ತಿದ್ದು, ಉಷ್ಣಾಂಶದ ಒತ್ತಡ ಗುಡುಗು ಸಿಡಿಲು ಹಾಗೂ ಮಳೆಯ ಆರ್ಭಟಕ್ಕೆ ಕಾರಣವಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಿತಿಮತಿ ಭಾಗಕ್ಕೆ ಉತ್ತಮ ಮಳೆ

ನಾಗರಹೊಳೆ ಅರಣ್ಯದಂಚಿನ ತಿತಿಮತಿ ಭಾಗಕ್ಕೆ ಈ ಬಾರಿ ಉತ್ತಮ ಮಳೆಯಾಗಿದೆ. ತಿತಿಮತಿ ಭಾಗ ಸಾಮಾನ್ಯವಾಗಿ ಮಳೆ ಕೊರತೆ ಎದುರಿಸುವ ಪ್ರದೇಶ. ಆದರೆ ಅಚ್ಚರಿ ಎಂಬಂತೆ ಈ ವರ್ಷ ಜನವರಿಯಿಂದಲೂ ಮಳೆ ಬೀಳುತ್ತಿದೆ. ಇದರಿಂದ ಮರ ಗಿಡಗಳು ಚಿಗುರಿ ಕಂಗೊಳಿಸುತ್ತಿವೆ. ಭೂಮಿ ಮೇಲಿನ ಹುಲ್ಲು ಹಸಿರಾಗಿದೆ. ಹುಣಸೂರು, ಗೋಣಿಕೊಪ್ಪಲು ಮುಖ್ಯ ರಸ್ತೆ, ತಿತಿಮತಿ ಭಾಗದಲ್ಲಿ ಎರಡು ಬದಿಯಲ್ಲಿ ಹಸಿರಾಗಿದ್ದು ಕಣ್ಣಿಗೆ ತಂಪುಣಿಸುತ್ತಿದೆ.

ದೇವಮಚ್ಚ, ಆನೆಚೌಕೂರು ಮೀಸಲು ಅರಣ್ಯ ಹಾಗೂ ಮತ್ತಿಗೋಡು, ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿನ ಗಿಡಗಂಟಿ ಹಾಗೂ ಮರಗಳು ಹಸಿರೊಡೆದಿವೆ. ಅರಣ್ಯದ ಕೆರೆಗಳಿಗೆ ಅರ್ಧ ಭಾಗದಷ್ಟು ನೀರು ಬಂದಿದೆ. ಇದರಿಂದ ಕಾಡಿನ ಪ್ರಾಣಿಗಳಿಗೆ ಒಳ್ಳೆಯದಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆ ನೌಕರರು.

ಭಾನುವಾರ ರಾತ್ರಿ ತಿತಿಮತಿ, ದೇವರಪುರ, ಗೋಣಿಕೊಪ್ಪಲು ಭಾಗಕ್ಕೆ ಉತ್ತಮ ಮಳೆ ಬಿದ್ದಿತು. ರಾತ್ರಿ 8 ಗಂಟೆಗೆ ಆರಂಭವಾದ ಮಳೆ ರಾತ್ರಿ 10 ಗಂಟೆವರೆಗೂ ಸುರಿಯಿತು. ಮಳೆಯೊಂದಿಗೆ ಬೀಸಿದ ರಭಸದ ಗಾಳಿಗೆ ಗೋಣಿಕೊಪ್ಪಲು ಪಟ್ಟಣದ ಕೆಲವು ಅಂಗಡಿ ಮುಂಗಟ್ಟುಗಳ ಫಲಕಗಳು ನೆಲಕ್ಕೆ ಬಿದ್ದು ಹಾನಿಯಾದವು. ಗಾಜುಗಳು ಒಡೆದು ಚೂರಾದವು.

ಮಳೆ ವಿವರ

ಜನವರಿಯಿಂದ ಇಲ್ಲಿಯವರೆಗೆ ಶ್ರೀಮಂಗಲ ಹೋಬಳಿಯಲ್ಲಿ 4.96 ಇಂಚು, ಹುದಿಕೇರಿ ಹೋಬಳಿಯಲ್ಲಿ 4.44 ಇಂಚು, ಸೋಮವಾರಪೇಟೆ ಹೋಬಳಿಗೆ 6.57 ಇಂಚು, ಶನಿವಾರಸಂತೆಗೆ 6.42 ಇಂಚು, ಗೋಣಿಕೊಪ್ಪಲಿನಲ್ಲಿ 10 ಇಂಚು, ತಿತಿಮತಿಯಲ್ಲಿ 9 ಇಂಚು, ಕುಶಾಲನಗರದಲ್ಲಿ 14.21 ಇಂಚು, ಹಾರಂಗಿಯಲ್ಲಿ 3.15 ಇಂಚು, ಕೊಟ್ಟಗೇರಿಗೆ 11.18 ಇಂಚು, ರಾಜಪುರ, ಸುಳುಗೋಡು ವ್ಯಾಪ್ತಿಗೆ 4 ಇಂಚು, ದಿಡ್ಡಳ್ಳಿ, ಚೆನ್ನಯ್ಯನಕೋಟೆಗೆ 10 ಇಂಚು ಮಳೆ ಸುರಿದಿದೆ. ಅತೀ ಹೆಚ್ಚು ಮಳೆ ಬೀಳುವ ಪುಷ್ಪಗಿರಿ ಬೆಟ್ಟ ತಪ್ಪಲಿನ ಶಾಂತಳ್ಳಿಗೆ 4.45 ಇಂಚು ಮಾತ್ರ ಮಳೆ ಬಿದ್ದಿದ್ದು, ಕುಟ್ಟ ವ್ಯಾಪ್ತಿ 3.30 ಇಂಚು, ಅಮ್ಮತ್ತಿಯಲ್ಲಿ 15 ಇಂಚು ಮಳೆಯಾಗಿದೆ.