ಗೋಣಿಕೊಪ್ಪಲು, ಮೇ 8 : ಪೊನ್ನಂಪೇಟೆ ತಾಲೂಕು ರಚನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಕೋರಿ ನ್ಯಾಯಾಲಯ ದಲ್ಲಿ ದಾವೆ ಹೂಡುವ ನಿರ್ಣಯವನ್ನು ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ತಾಲೂಕು ರಚನೆ ಹೋರಾಟ ಸಮಿತಿಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನಾಭಿಪ್ರಾಯದಂತೆ ನಿರ್ಧರಿಸಲಾಯಿತು.ತಾಲೂಕು ರಚನೆ ಹೋರಾಟ ಸಮಿತಿ ಗೌರವ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ತಾಲೂಕು ರಚನೆ ಆದರೆ ಬಿಜೆಪಿಗೆ ಲಾಭವಾಗುತ್ತದೆ ಎಂಬ ಅಭಿಪ್ರಾಯವಿರಬಹುದು. ಆದರೆ ಈಗಾಗಲೇ ಘೋಷಿಸಿರುವ ತಾಲೂಕುಗಳಲ್ಲಿ ಸರ್ಕಾರದ ಮಾನದಂಡಗಳಿಲ್ಲದೆ ತಾಲೂಕುಗಳಿವೆ. ಇದನ್ನು ನಾವು ನ್ಯಾಯಾಲಯದ ಮೂಲಕ ಸರ್ಕಾರಕ್ಕೆ ಮನವರಿಕೆ ಮಾಡಬೇಕಿದೆ.
ರಾಜ್ಯದಲ್ಲಿ ತಾಲೂಕು ರಚನೆ ಬಗ್ಗೆ ಸರ್ಕಾರಕ್ಕೆ ನೀಡಿರುವ ವರದಿಗಳಲ್ಲಿ ಇಲ್ಲದ ತಾಲೂಕು ರಚಿಸಿರುವ ಕ್ರಮದ ಬಗ್ಗೆ ಕೂಡ ಸರ್ಕಾರಕ್ಕೆ ತಿಳಿಸುವ ಕೆಲಸವಾಗಬೇಕಿದೆ. ಈ ಬಗ್ಗೆ ನಾವು ನ್ಯಾಯಾಂಗ ಹೋರಾಟ ನಡೆಸಲು ಸಿದ್ಧರಾಗಬೇಕು.ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಈಗಾಗಲೇ ಕಂದಾಯ ಇಲಾಖೆಯ ಕಾರ್ಯದರ್ಶಿ ಅವರಲ್ಲಿರುವ ನಮ್ಮ ಅರ್ಜಿಯನ್ನು ಸಂಪುಟಕ್ಕೆ ತರಲಿ. ಆಗ ನಾನು ಪೊನ್ನಂಪೇಟೆ ತಾಲೂಕು ರಚನೆಯ ಧ್ವನಿಯಾಗಿ ಒತ್ತಾಯ ಮಾಡುತ್ತೇನೆ ಎಂದರು. ಕಾರ್ಯಾಧ್ಯಕ್ಷ ಅರುಣ್ ಮಾಚಯ್ಯ ಮಾತನಾಡಿ, ತಾಲೂಕು ರಚನೆಗೆ ಮಾನದಂಡ ಇಲ್ಲದಿದ್ದರೂ ತಾಲೂಕು ಎಂದು ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿದೆ. ಇದರ ವಿರುದ್ಧ ನಾವು ಪ್ರತಿಪಾದನೆ ಮಾಡುವ ಅವಶ್ಯಕತೆ ಇದೆ. ಪೊನ್ನಂಪೇಟೆ ತಾಲೂಕು ರಚನೆಗೆ ಹಿಂದೇಟು ಹಾಕುತ್ತಿರುವದರ ವಿರುದ್ಧ ಸರ್ಕಾರವನ್ನು ನ್ಯಾಯಾಲಯದ ಮೂಲಕ ಪ್ರಶ್ನಿಸಬೇಕಾಗಿದೆ. ಪರಿಣಿತ ವಕೀಲರ ಸಲಹೆ ಪಡೆದು ನಾವು ನ್ಯಾಯಾಂಗ ಹೋರಾಟಕ್ಕೆ ಮುಂದಾಗಬೇಕು. ಮುಂದೆ ಚುನಾವಣೆ ನಡೆಯುವದರಿಂದ ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಮುಂದಾಗಬೇಕಿದೆ ಎಂದರು.
ಪೊನ್ನಂಪೇಟೆಗೆ ಆಗಮಿಸಿದ್ದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಪೊನ್ನಂಪೇಟೆ ತಾಲೂಕು ರಚನೆ ಬಗ್ಗೆ ಮನವಿ ಸಲ್ಲಿಸಿದ್ದರೂ ಪ್ರತಿಕ್ರಿಯೆ ನೀಡದೆ, ಕನಿಷ್ಟ ಅರ್ಜಿ ಸ್ವೀಕೃತಿ ಮಾಡಿರುವ ಬಗ್ಗೆ ಸಮಿತಿಗೆ ಸಹಿ ಮಾಡದೆ ಅರ್ಜಿ ನೀಡಿರುವ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ಇದೇ ಸಂದರ್ಭ ಸಮಿತಿ ಸಂಚಾಲಕರಾಗಿ ಮಾಚಿಮಾಡ ರವೀಂದ್ರ ಅವರನ್ನು ಆಯ್ಕೆ ಮಾಡಲಾಯಿತು.
ಸಮಿತಿ ಸದಸ್ಯ ಎರ್ಮು ಮಾತನಾಡಿ, ಅರಣ್ಯ ನಿಗಮ ಮಂಡಳಿ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಅವರೊಂದಿಗೆ ಕಂದಾಯ ಸಚಿವರನ್ನು ಭೇಟಿ ಮಾಡಿದಾಗ ಪೊನ್ನಂಪೇಟೆಗೆ ವಿಶೇಷ ತಹಶೀಲ್ದಾರ್ ನೇಮಿಸುವ ಬಗ್ಗೆ ಜಿಲ್ಲಾಧಿಕಾರಿಯಿಂದ ವರದಿ ನೀಡುವಂತೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿಗೆ ಪತ್ರ ಬಂದಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿ ಪಂ ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ, ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಪಿ ಬಿ ಪೂಣಚ್ಚ, ಜಿ ಪಂ ಸದಸ್ಯೆ ಶ್ರೀಜಾ ಅಚ್ಚುತ್ತನ್, ತಾ ಪಂ ಸದಸ್ಯೆ ಮೂಕಳೇರ ಆಶಾ, ಪದಾಧಿಕಾರಿಗಳಾದ ಮತ್ರಂಡ ಅಪ್ಪಚ್ಚು ಉಪಸ್ಥಿತರಿದ್ದರು. ಕಾಳಿಮಾಡ ಮೋಟಯ್ಯ ನಿರೂಪಿಸಿದರು.