ನಾಪೆÇೀಕ್ಲು, ಮೇ. 8: ಸೋಲು-ಗೆಲುವು ನಮ್ಮ ಕೈಯಲ್ಲಿಲ್ಲ ಎಂಬದಕ್ಕೆ ಮಾಜಿ ಚಾಂಪಿಯನ್ ಕಲಿಯಂಡ ಕುಟುಂಬ ತಂಡವೇ ಉದಾಹರಣೆ. 1997ರಲ್ಲಿ ಮೊದಲ ಬಾರಿಗೆ ಕೊಡವ ಕುಟುಂಬಗಳ ನಡುವೆ ಕರಡದಲ್ಲಿ ನಡೆದ ಪಾಂಡಂಡ ಕಪ್ ಹಾಕಿ ನಮ್ಮೆಯಲ್ಲಿ ವಿಜಯಪತಾಕೆ ಹಾರಿಸಿದ ಕಲಿಯಂಡ ತಂಡವು 2014ರ ತಾತಂಡ ಕಪ್ ಹಾಗೂ ಕಳೆದ ಬಾರಿ ನಡೆದ ಶಾಂತೆಯಂಡ ಕಪ್ ಹಾಕಿ ನಮ್ಮೆಯಲ್ಲಿಯೂ ಪ್ರಥಮ ಸ್ಥಾನ ಪಡೆಯುವದರೊಂದಿಗೆ ಹಾಕಿ ಪ್ರೇಮಿಗಳ, ಕೊಡವರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ತಾವು ಅಂದುಕೊಂಡಂತೆ ಏನೂ ಇಲ್ಲ ಎಂಬಂತೆ ಮೇ 8 ರಂದು ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಬಿದ್ದಾಟಂಡ ಕಪ್ ಹಾಕಿ ನಮ್ಮೆಯ ಪಂದ್ಯಾಟದಲ್ಲಿ ಪ್ರ್ರೀ ಕ್ವಾರ್ಟರ್ ಫೈನಲ್‍ನ ಅರ್ಹತಾ ಸುತ್ತಿನಲ್ಲಿಯೇ ಪುದಿಯೊಕ್ಕಡ ತಂಡಕ್ಕೆ ಸೋತಿರುವದು ಹಾಕಿ ಪ್ರೇಮಿಗಳಿಗೆ ಅಚ್ಚರಿ ಮೂಡಿಸಿದೆ. ಹಿಂದೆ ಪ್ರಬಲ ತಂಡ ಮಾಜಿ ಚಾಂಪಿಯನ್ ಪಳಂಗಂಡ ತಂಡವನ್ನೂ ಸೋಲಿಸಿದ, ಇತರ ತಂಡಗಳಿಗೆ ಸೋಲಿನ ಭಯ ಹುಟ್ಟಿಸಿದ ಕಲಿಯಂಡ ತಂಡ ಸೋಲುವದರ ಮೂಲಕ ಪಂದ್ಯಾಟದಿಂದ ಹೊರ ಬಿದ್ದಿದೆ.ಅದರೊಂದಿಗೆ ಮೂರು ಬಾರಿ ಚಾಂಪಿಯನ್ ಪಟ್ಟ ಪಡೆದ ಕುಲ್ಲೇಟಿರ ತಂಡ ತನ್ನ ತವರು ನೆಲದಲ್ಲಿಯೇ ಕರಿನೆರವಂಡ ತಂಡದ ವಿರುದ್ಧ ಸೋತಿರುವದು ಸ್ಥಳೀಯ ಕ್ರೀಡಾಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಮಾಜಿ ಚಾಂಪಿಯನ್ ಮಂಡೇಪಂಡ ತಂಡ ಮುನ್ನಡೆ ಸಾಧಿಸಿದೆ.
ಸೋಮವಾರ ಕುಲ್ಲೇಟಿರ ಮತ್ತು ಕರಿನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕರಿನೆರವಂಡ ತಂಡವು ಕುಲ್ಲೇಟಿರ ತಂಡವನ್ನು 1-0 ಗೋಲಿನ ಅಂತರದಿಂದ ಸೋಲಿಸಿತು. ಕರಿನೆರವಂಡ ಲಿತೇಶ್ ಬಿದ್ದಪ್ಪ 15 ನಿಮಿಷದಲ್ಲಿ ಒಂದು ಗೋಲು ದಾಖಲಿಸುವದರ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಮಂಡೇಪಂಡ ಮತ್ತು ಮೇವಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಮಂಡೇಪಂಡ ತಂಡವು 4-0 ಗೋಲಿನಿಂದ ಮೇವಡ ತಂಡವನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮಂಡೇಪಂಡ ಚಂದನ್ ಕಾರ್ಯಪ್ಪ 17 ಮತ್ತು 23 ನಿಮಿಷದಲ್ಲಿ ಗೋಲು ದಾಖಲಿಸಿದರೆ, ಬೋಪಣ್ಣ 35ನೇ ನಿಮಿಷದಲ್ಲಿ ಮತ್ತು ದಿಲನ್ 36ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಪುದಿಯೊಕ್ಕಡ ಮತ್ತು ಕಲಿಯಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಪುದಿಯೊಕ್ಕಡ ತಂಡವು 1-0 ಗೋಲಿನ ಅಂತರದಿಂದ ಕಲಿಯಂಡ ತಂಡವನ್ನು ಮಣಿಸಿತು. ಪುದಿಯೊಕ್ಕಡ ನಿರನ್ ನಾಚಪ್ಪ 20ನೇ ನಿಮಿಷದಲ್ಲಿ ದಾಖಲಿಸಿದ ಒಂದು ಗೋಲು ತಂಡದ ಗೆಲುವಿಗೆ ಕಾರಣವಾಯಿತು.
-ಪಿ.ವಿ.ಪ್ರಭಾಕರ್