ಕುಶಾಲನಗರ, ಮೇ 8: ಕುಶಾಲನಗರ ನಾಡಕಚೇರಿ ಆವರಣದಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಕುಶಾಲನಗರ ನಗರ ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಸ್ಥಳೀಯ ನಾಡಕಚೇರಿ ಆವರಣದಲ್ಲಿ ಹಲವಾರು ಸರಕಾರಿ ಕಛೇರಿಗಳು ಕಾರ್ಯನಿರ್ವಹಿಸುತ್ತಿದ್ದು ನಾಗರೀಕರಿಗೆ ಯಾವದೇ ರೀತಿಯ ಮೂಲಭೂತ ವ್ಯವಸ್ಥೆ ಇಲ್ಲದೆ ಅನಾನುಕೂಲವಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಆವರಣದಲ್ಲಿ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ, ಆಸನ ವ್ಯವಸ್ಥೆ, ಮೇಲ್ಛಾವಣಿ ನಿರ್ಮಾಣ ಇಂತಹ ಹಲವು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದರು. ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಉಪ ತಹಶೀಲ್ದಾರ್ ನಂದಕುಮಾರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ, ಪ್ರಮುಖರಾದ ನಿಡ್ಯಮಲೆ ದಿನೇಶ್, ಭಾಸ್ಕರ್ ನಾಯಕ್, ಶಿವಶಂಕರ್, ಶಿವಾಜಿರಾವ್, ವೈಶಾಖ್, ರಾಮಚಂದ್ರ, ಪಿ.ಪಿ. ಸತ್ಯನಾರಾಯಣ, ಎಂ.ವಿ.ನಾರಾಯಣ, ಜಿ.ಎಲ್.ನಾಗರಾಜ್, ಡಾಟಿ ಮತ್ತಿತರರು ಇದ್ದರು.