ಮಡಿಕೇರಿ, ಮೇ 8: ಸ್ವಾತಂತ್ರ್ಯ ನಂತರ ಸುಮಾರು 60 ವರ್ಷಗಳ ಆಡಳಿತ ನಡೆಸಿರುವ ಕಾಂಗ್ರೆಸ್ ಅಧಿಕಾರ ಮಾತ್ರ ಅನುಭವಿಸಿದ್ದು, ದೇಶದ ಜನತೆಗೆ ಮೂಲಭೂತ ಸೌಲಭ್ಯವನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷೆ ಭಾರತಿ ಶೆಟ್ಟಿ ಆರೋಪಿಸಿದ್ದಾರೆ. ನಗರದ ಭಾರತೀಯ ವಿದ್ಯಾ ಭವನದಲ್ಲಿ ನಡೆದ ಭಾರತೀಯ ಮಹಿಳಾ ಮೋರ್ಚದ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ ಬಂದ ನಂತರ ಜನ ಬಹು ನಿರೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದರು. ಆದರೆ ಕಾಂಗ್ರೆಸ್ ಅಧಿಕಾರವನ್ನು ಪಡೆದು, ಅನುಭವಿಸಿದರೇ ವಿನಃ ಸಾಮಾನ್ಯ ಜನರಿಗಾಗಿ ಯಾವ ಕಾರ್ಯವನ್ನು ಮಾಡಲಿಲ್ಲ. ಗರೀಭಿ ಹಠಾವೋ ಎಂದರೂ ಆ ಕಾರ್ಯ ಮಾಡಲಿಲ್ಲ. ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತಂದರೂ ಅದರಿಂದ ಕೂಡ ಸಾಮಾನ್ಯ ಕಷ್ಟ ಸುಧಾರಿಸಲಿಲ್ಲ ಎಂದು ಟೀಕಿಸಿದರು.
ಇಂದು ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ 19 ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ಬೇಸತ್ತ ಜನರು ಬಿಜೆಪಿಗೆ ಮತ ನೀಡುತ್ತಿದೆ. ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ದೇಶ ಬಿಜೆಪಿ ಮಯವಾಗುತ್ತಿದ್ದು, 2018 ರ ಚುನಾವಣೆಗೆ ಸಜ್ಜಾಗಬೇಕಿದೆ.
ರಾಜ್ಯದ ಬಹುತೇಕ ಯೋಜನೆಗಳಿಗೆ ಕೇಂದ್ರ ಸರಕಾರದಿಂದ ಹಣ ನೀಡಲಾಗುತ್ತದೆ. ಆದರೆ ಕಾವೇರಿ ವಿವಾದ, ಬರ ಪರಿಹಾರ, ಮಹದಾಯಿ ಯೋಜನೆ, ಸಾಲ ಮನ್ನಾ ಸೇರಿದಂತೆ ಪ್ರತಿ ವಿಚಾರಕ್ಕೂ ರಾಜ್ಯ ಸರಕಾರ ಕೇಂದ್ರ ಸರಕಾರದ ಕಡೆ ಕೈ ತೋರಿಸುತ್ತಿರುವದು ಶೋಚನೀಯ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ ಸುನೀಲ್ ಸುಬ್ರಮಣಿ ಮಾತನಾಡಿ, ಇಂದು ಮೋದಿ ವಿಶ್ವದ ನಾಯಕರಾಗಿ ಬೆಳೆಯುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಯೋಗ, ಸ್ವಚ್ಛ ಭಾರತ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ದೇಶದ ಹೆಸರನ್ನು ಎತ್ತರಕ್ಕೆ ಏರಿಸಿದ್ದಾರೆ. 2018 ರ ಚುನಾವಣೆ ಎದುರಾಗುತ್ತಿದ್ದು, ಕಾರ್ಯಕರ್ತರೆಲ್ಲ ಒಟ್ಟಾಗಿ ದುಡಿಯುವ ಅಗತ್ಯವಿದೆ. ಇದಕ್ಕೆ ಮಹಿಳಾ ಮೋರ್ಚದ ಸಹಕಾರ ಅಗತ್ಯ ಎಂದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ ಮಾತನಾಡಿ, ಮಹಿಳಾ ಮೋರ್ಚಾ ಇಂದು ಉತ್ತಮ ಕಾರ್ಯ ಮಾಡುತ್ತಿದ್ದು, ಪ್ರತಿ ಹಂತದಲ್ಲೂ ಪಕ್ಷಕ್ಕೆ ನೆರವು ನೀಡುತ್ತಿದೆ. ನಾಯಕರ ತಪ್ಪಿನಿಂದ ಮಡಿಕೇರಿ ನಗರಸಭೆ ಅಧ್ಯಕ್ಷ ಸ್ಥಾನವನ್ನು ನಮ್ಮ ಪಕ್ಷ ಕಳೆದುಕೊಂಡಿದೆ. ಈ ಒಂದು ಸ್ಥಾನವನ್ನು ಪಡೆದುಕೊಂಡಿದ್ದರೆ ಕೊಡಗು ಜಿಲ್ಲೆ ಕಾಂಗ್ರೆಸ್ ಮುಕ್ತ ಜಿಲ್ಲೆಯಾಗುತ್ತಿತ್ತು ಎಂದರು.
ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಯಮುನಾ ಚಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಮಹಿಳಾ ಮೋರ್ಚದ ಉಪಾಧ್ಯಕ್ಷೆ ಭಾರತಿ ಮಲ್ಲಿಕಾರ್ಜುನ, ಪ್ರಮುಖರಾದ ಶಾಂತೆಯಂಡ ರವಿ ಕುಶಾಲಪ್ಪ, ಕಾಂತಿ ಸತೀಶ್, ಲೋಕೇಶ್ವರಿ ಗೋಪಾಲ್, ತೆಕ್ಕಡೆ ಶೋಭಾ ಮೋಹನ್ ಮತ್ತಿತರರು ಇದ್ದರು. ಜಯಂತಿ ಪ್ರಾರ್ಥಿಸಿ, ಗೀತಾ ಪವಿತ್ರ ಸ್ವಾಗತಿಸಿ, ಅನಿತಾ ಪೂವಯ್ಯ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿ ತಾಣ ರಾಜಾಸೀಟ್ನಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು. 2014ರ ಅ. 2ರಂದು ಮಹತ್ಮಾ ಗಾಂಧೀಜಿ ಅವರ 150ನೇ ಜನ್ಮ ದಿನೋತ್ಸವದಂದು ಗಾಂಧೀಜಿ ಅವರ ಕನಸು ನನಸು ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಆಶಯದೊಂದಿಗೆ ಸ್ವಚ್ಛಭಾರತ ಕಾರ್ಯಕ್ರಮವನ್ನು ಮಹಿಳಾ ಮೋರ್ಚಾ ವತಿಯಿಂದ ನಡೆಸಲಾಯಿತು.