ವೀರಾಜಪೇಟೆ, ಮೇ 8 ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಇಪ್ಪತ್ತೊಂಬತ್ತನೇ ಅಧ್ಯಕ್ಷರಾಗಿ ಇ.ಸಿ.ಜೀವನ್ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಭಾರತೀಯ ಜನತಾ ಪಕ್ಷ ಪಟ್ಟಣ ಪಂಚಾಯಿತಿಯಲ್ಲಿ ಸ್ಪಷ್ಟ ಬಹುಮತ ಹೊಂದಿದ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರ ಆದೇಶದಂತೆ ಇಂದು ಬೆಳಿಗ್ಗೆ 11.30 ಗಂಟೆಗೆ ಇ.ಸಿ.ಜೀವನ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅಪರಾಹ್ನ 2.15ಕ್ಕೆ ತಾಲೂಕು ತಹಶೀಲ್ದಾರ್ ಹಾಗೂ ತಾಲೂಕು ಸಹಾಯಕ ಚುನಾವಣಾಧಿಕಾರಿ ಮಹದೇವಸ್ವಾಮಿ ಅವರು ಜೀವನ್ ಅವರ ಆಯ್ಕೆಯನ್ನು ಪ್ರಕಟಿಸಿದರು.ಚುನಾವಣೆಯಲ್ಲಿ 16 ಮಂದಿ ಸದಸ್ಯರು ಹಾಜರಿದ್ದು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು. ಬಿಜೆ.ಪಿ. ವತಿಯಿಂದ ಜಿಲ್ಲಾ ಸಮಿತಿ ಉಪಾಧ್ಯಕ್ಷ
ಪಿ. ರಘುನಾಣಯ್ಯ, ತಾಲೂಕು ಸಮಿತಿ ಅಧ್ಯಕ್ಷ
(ಮೊದಲ ಪುಟದಿಂದ) ಕೆ. ಅರುಣ್ ಭೀಮಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ. ಬೋಪಣ್ಣ, ಆರ್.ಎಂ.ಸಿ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ನಗರ ಸಮಿತಿ ಅಧ್ಯಕ್ಷ ಅನಿಲ್ ಮಂದಣ್ಣ, ಕಾರ್ಯದರ್ಶಿ ಟಿ.ಎಂ. ಯೊಗೀಶ್ ನಾಯ್ಡು, ಪ್ರಧಾನ ಕಾರ್ಯದರ್ಶಿ ದಿವಾಕರ್ ಶೆಟ್ಟಿ, ಜೀವನ್, ಪಟ್ಟಣ ಪಂಚಾಯಿತಿ ಮಾಜಿ ಹಿರಿಯ ಸದಸ್ಯ ಸಿ.ಕೆ. ಪೃಥ್ವಿನಾಥ್ ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ, ಮಾಜಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಕಾಂಗ್ರೆಸ್ ಹಾಗೂ ಜನತಾದಳದ ಸದಸ್ಯರುಗಳು ಹಾಜರಿದ್ದರು.
ಚುನಾವಣೆ ಪ್ರಕ್ರಿಯೆ ಮುಗಿದು ಘೋಷಣೆಯಾಗುತ್ತಿದ್ದಂತೆ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಹೊರಗಡೆ ಕಾಯುತ್ತಿದ್ದ ಮುತ್ತಪ್ಪ ದೇವಾಲಯದ ಟ್ರಸ್ಟಿಗಳು, ಆಡಳಿತ ಮಂಡಳಿ ಸದಸ್ಯರುಗಳು, ಮಲಯಾಳಿ ಸಮಾಜದ ಪ್ರಮುಖರು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಜನತಾದಳ ಪಕ್ಷದ ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯ ಎಸ್.ಎಚ್. ಮತೀನ್ ಪಕ್ಷದ ವತಿಯಿಂದ ಹೂವಿನ ಹಾರ ಹಾಕಿ ಅಭಿನಂದಿಸಿದರು.
ಪಂಚಾಯಿತಿ ಹಿರಿಯ ಸದಸ್ಯ ಕೆ.ಎನ್.ವಿಶ್ವನಾಥ್ ಮಾತನಾಡಿ, ಪಟ್ಟಣ ಪಂಚಾಯಿತಿಯ ಅಭಿವೃದ್ಧಿ ಕಾರ್ಯದಲ್ಲಿ ಅಧ್ಯಕ್ಷರು ಸೇರಿದಂತೆ ಸದಸ್ಯರೆಲ್ಲರೂ ಒಮ್ಮತ ಸಾಧಿಸಬೇಕು ಎಂದು ಸಲಹೆ ನೀಡಿದರು.
ಪ್ರಭಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಉಪಾಧ್ಯಕ್ಷೆ ತಸ್ನೀಂ ಅಕ್ತರ್ ಫಲಿತಾಂಶದ ಬಳಿಕ ಅಧಿಕಾರ ಹಸ್ತಾಂತರ ಮಾಡಿದರು. ಕಾಂಗ್ರೆಸ್‍ನ ಮೂರು ಮಂದಿ ನಾಮಕರಣ ಸದಸ್ಯರು ಗೈರು ಹಾಜರಾಗಿದ್ದರು.
ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಅಭಿಯಂತರ ಎನ್.ಪಿ.ಹೇವiಕುಮಾರ್ ಇತರರು ಅಧ್ಯಕ್ಷರನ್ನು ಅಭಿನಂದಿಸಿದರು.
ರಾಜಕೀಯ ರಹಿತವಾಗಿ ಪಟ್ಟಣದ ಅಭಿವೃದ್ಧಿ : ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ ಇ.ಸಿ. ಜೀವನ್ ರಾಜಕೀಯ ರಹಿತವಾಗಿ ಪಟ್ಟಣದ ಅಭಿವೃದ್ಧಿಗೆ ಎಲ್ಲರ ಒಮ್ಮತದೊಂದಿಗೆ ಶ್ರಮಿಸುವೆ ಇನ್ನು ಹದಿನೆಂಟು ತಿಂಗಳ ಅಧಿಕಾರದಲ್ಲಿ ವೀರಾಜಪೇಟೆ ಪಟ್ಟಣವನ್ನು ಶುಚಿತ್ವದ ಸುಂದರ ಅಭಿವೃದ್ಧಿಯ ಪಟ್ಟಣವನ್ನಾಗಿ ಮಾಡುವ ಅಕಾಂಕ್ಷೆ ಹೊಂದಿದ್ದೇನೆ, ಈ ನಿಟ್ಟಿನಲ್ಲಿ ಸದಸ್ಯರುಗಳ ಸಹಕಾರವನ್ನು ನಿರೀಕ್ಷಿಸುವದಾಗಿ ಹೇಳಿದರು.
ವೀರಾಜಪೇಟೆ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಮುಂದೆ ನಗರ ಪೊಲೀಸರಿಂದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.