ಮಡಿಕೇರಿ, ಮೇ 8 : ಪ್ರತಿಯೊಬ್ಬರು ಉನ್ನತ ಶಿಕ್ಷಣವನ್ನು ಪಡೆಯುವ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದು ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನ ಕನ್ನಡ ಭಾಷಾ ಅಧ್ಯಯನ ವಿಭಾಗದ ಮುಖ್ಯಸ್ಥ ಹೆಚ್.ಆರ್.ಅರ್ಜುನ್ ಅಭಿಪ್ರಾಯ ಪಟ್ಟಿದ್ದಾರೆ. ಕೊಂಡಂಗೇರಿಯ ಶಿಫಾ ಕೇಂದ್ರ ಮುಸಾಫರ್ ಖಾನಾ ಸಂಸ್ಥೆಯ 30 ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದರು. ಯಾವದೇ ಒಂದು ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಉತ್ತಮ ಶಿಕ್ಷಣ ಪೂರಕವಾಗಲಿದೆ ಶಿಫಾ ಕೇಂದ್ರದ ಮುಖ್ಯಸ್ಥ ಸಿ.ಬಿ. ಮೊಹಮದ್ ಹಸ್ರತ್ ಬಾಬಾ ಅವರ ಸಮಾಜ ಸೇವೆ, ಬಡವರ ಬಗೆಗಿನ ಕಾಳಜಿ ಶ್ಲಾಘನಾರ್ಹವೆಂದು ಹೇಳಿದರು.
(ಮೊದಲ ಪುಟದಿಂದ) ಧರ್ಮಗುರು ದುಗ್ಗಲಡ್ಕದ ಸಯ್ಯದ್ ಝೈನುಲ್ ಆಭಿದೀನ್ ತಂಞಳ್ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ಯಾವದೇ ಸಂದರ್ಭದಲ್ಲೂ ಧರ್ಮದ ತತ್ವಾದರ್ಶಗಳನ್ನು ಗಾಳಿಗೆ ತೂರದೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಯಶಸ್ಸು ಸಾಧ್ಯವೆಂದು ತಿಳಿಸಿದರು.
ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಸ್ಲಿಂ ಸಮಾಜದ ಮುಖಂಡ ಹಾಗೂ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಮುಸ್ಲಿಮರ ವಿರುದ್ಧ ವಿನಾಕಾರಣ ಟೀಕೆ ಮತ್ತು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ ಜನಾಂಗ ಬಾಂಧವರು ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹಾಲುಗುಂದ ಗ್ರಾ.ಪಂ ಮಾಜಿ ಅಧ್ಯಕ್ಷ ಮಾಚೆಟ್ಟಿರ ಕೆ.ನಾಚಪ್ಪ, ಕೊಂಡಂಗೇರಿ ಶಿಫಾ ಕೇಂದ್ರವು ಭಕ್ತರ ಪಾಲಿಗೆ ಆಶಾ ಕೇಂದ್ರವಾಗಿದ್ದು, ತಮ್ಮ ರಾಜಕೀಯ ಹಾಗೂ ಸಮಾಜಿಕ ಬೆಳವಣಿಗೆಗೆ ಈ ಕೇಂದ್ರ ಬಹಳಷ್ಟು ಸಹಕಾರಿಯಾಗಿದೆ ಎಂದರು.
ಸನ್ಮಾನ : ಮಂಗಳೂರು ವಿವಿಯಲ್ಲಿ ಕನ್ನಡ ಎಂ.ಎ ಪದವಿಯಲ್ಲಿ ಚಿನ್ನದ ಪದಕ ವಿಜೇತರಾದ ಪ್ರಸ್ತುತ ಮೂಡಬಿದ್ರೆಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಮಾದಾಪುರದ ಕೆ.ಹೆಚ್.ಮುಸ್ತಫಾ ಅವರನ್ನು ಶಿಫಾ ಕೇಂದ್ರದ ವತಿಯಿಂದ ಗಣ್ಯರು ಸನ್ಮಾನಿಸಿದರು.
2016 ನೇ ಸಾಲಿನಲ್ಲಿ ಹತ್ತನೇ ತರಗತಿ ಹಾಗೂ ಪಿಯುಸಿಯಲ್ಲಿ ಶೇ.80 ಕ್ಕಿಂತ ಅಧಿಕ ಅಂಕಗಳಿಸಿದ ಜಿಲ್ಲೆಯ ಮುಸ್ಲಿಂ ಜನಾಂಗದ 50 ಕ್ಕೂ ಅಧಿಕ ಪ್ರತಿಭಾವಂತರಿಗೆ ನಗದು ಬಹುಮಾನ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶೇ.80 ರಷ್ಟು ಮಂದಿ ಹೆಣ್ಣು ಮಕ್ಕಳೇ ಸನ್ಮಾನಕ್ಕೆ ಭಾಜನರಾಗಿದ್ದು ವಿಶೇಷವಾಗಿತ್ತು.
ಶಿಫಾ ಕೇಂದ್ರದ ಮುಖ್ಯಸ್ಥ ಸಿ.ಬಿ.ಮೊಹಮ್ಮದ್ ಅಸ್ರತ್ ಬಾಬಾ ಅವರು ಪ್ರಾಸ್ತವಿಕ ನುಡಿಗಳನ್ನಾಡಿದರು. ಹಾಲುಗುಂದ ಗ್ರಾ.ಪಂ. ಅಧ್ಯಕ್ಷ ಎ.ಎಂ.ಶಾದುಲಿ, ಮಾಜಿ ಉಪಾಧ್ಯಕ್ಷ ಕೆ.ಎಂ. ಶಾದುಲಿ ಚಾಯಿಪ್ಪ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಪತ್ರಕರ್ತ ಎಂ.ಇ. ಮಹಮ್ಮದ್ ನಿರೂಪಿಸಿದರೆ, ಶಿಫಾ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸಿ.ಎಂ.ಇಸ್ಮಾಯಿಲ್ ದಾರಿಮಿ ವಂದಿಸಿದರು. ಧರ್ಮಗುರು ಮುಸ್ತಫಾ ಪೂಕೋಯ ತಂಞಳ್ ಪ್ರಾರ್ಥನೆ ನೆರವೇರಿಸಿ, ಶಿಫಾ ಕೇಂದ್ರದ ಕೆ.ಎಂ.ಹಂಝó ಸ್ವಾಗತಿಸಿದರು.