ಮಡಿಕೇರಿ, ಮೇ 9: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಒಳಚರಂಡಿ ಕಾಮಗಾರಿಯಡಿ ಈಗಾಗಲೇ ಕೊರೆದಿರುವ ರಸ್ತೆಗಳಲ್ಲಿನ ಗುಂಡಿಗಳನ್ನು ಶೀಘ್ರವಾಗಿ ಮುಚ್ಚುವಂತೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಭಿಯಂತರರಿಗೆ ನಗರಸಭೆ ಸೂಚನೆ ನೀಡಿದೆ.ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರುಗಳಾದ ಕೆ.ಎಸ್. ರಮೇಶ್, ಸಂಗೀತ ಪ್ರಸನ್ನ, ಸವಿತಾ ರಾಖೇಶ್, ಮನ್ಸೂರ್ ಇನ್ನಿತರರು ಒಳಚರಂಡಿ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದ್ದರೂ, ಮತ್ತೆ ಕಾಮಗಾರಿ ನಡೆಯುತ್ತಿದೆ. ರಸ್ತೆಗಳನ್ನು ಅಗೆಯಲಾಗಿದ್ದು, ಇನ್ನು ಮುಚ್ಚಲಾಗಿಲ್ಲ. ಈಗಾಗಲೇ ಮಳೆಗಾಲ ಆರಂಭವಾಗಲಿದ್ದು, ಈ ಬಗ್ಗೆ ಕೂಡಲೇ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಒಳಚರಂಡಿ ಮಂಡಳಿ ಅಭಿಯಂತರ ಆನಂದ್ ಅವರು ನಗರಸಭೆಯಿಂದ ಪತ್ರ ಬಂದ ಬಳಿಕ ಕೆಲಸ ಸ್ಥಗಿತ ಗೊಳಿಸಿದ್ದವು. ಆದರೆ ಕಾಮಗಾರಿಯ ಟೆಂಡರ್ ಸಂದರ್ಭದಲ್ಲಿ 36 ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳಿಸಬೇಕೆಂದು ಷರತ್ತು ಇರುವ ಕಾರಣ ಕೆಲಸ ನಿಲ್ಲಿಸುವಂತಿಲ್ಲ. ಹಾಗಾಗಿ ಈಗಾಗಲೇ ಅಗೆಯಲಾಗಿರುವ ರಸ್ತೆಗಳನ್ನು ಮುಚ್ಚುವ ಕಾರ್ಯ ಮಾಡ ಲಾಗುತ್ತಿದೆ. ಮಳೆ ಬರುತ್ತಿರುವ ದರಿಂದ ವಿಳಂಭವಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಪಾಧ್ಯಕ್ಷ

ಟಿ.ಎಸ್. ಪ್ರಕಾಶ್,

(ಮೊದಲ ಪುಟದಿಂದ) ಸದಸ್ಯರಾದ ಪಿ.ಡಿ. ಪೊನ್ನಪ್ಪ, ಅಮೀನ್ ಮೊಹಿಸಿನ್, ರಮೇಶ್ ಇನ್ನಿತರರು ಆರು ತಿಂಗಳಿಂದ ಕೊರೆದ ರಸ್ತೆಗಳನ್ನು ಇನ್ನೂ ಮುಚ್ಚಿಲ್ಲ. ಟೆಂಡರ್ ಪಡೆದುಕೊಂಡ ಬಳಿಕ ಎಲ್ಲ ವ್ಯವಸ್ಥೆಗಳನ್ನು ಸರಿಯಾಗಿ ಮಾಡಿಕೊಂಡಿರಬೇಕೆಂದು ಹೇಳಿದರು. ಮುಂದಿನ 15 ದಿನÀಗಳೊಳಗೆ ಪೂರ್ಣ ಗೊಳಿಸುವಂತೆ ಸೂಚನೆ ನೀಡಿದರು.

ಅನುದಾನ ಹಂಚಿಕೆ : ನಗರೋತ್ಥಾನ ಮೂರನೇ ಹಂತದ ಕಾಮಗಾರಿಗೆ ರೂ. 35 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದನ್ನು ಕುಡಿಯುವ ನೀರು, ಅಭಿವೃದ್ಧಿ ಕಾರ್ಯಗಳಿಗೆ ಹಂಚಿಕೆ ಮಾಡಲಾಯಿತು. ಈ ಮೊದಲು ಕುಡಿಯುವ ನೀರಿನ ಕುಂಡಾಮೇಸ್ತ್ರಿ ಯೋಜನೆಗೆ ರೂ. 15 ಕೋಟಿ ಮೀಸಲಾಗಿಟ್ಟಿದ್ದನ್ನು ಪರಿಷ್ಕರಿಸಿ ನೀರಿನ ಯೋಜನೆಗೆ ರೂ. 10 ಕೋಟಿ ಮೀಸಲಿಟ್ಟು ಅದರಲ್ಲಿಯೇ 3 ಟ್ಯಾಂಕ್‍ಗಳನ್ನು ನಿರ್ಮಿಸಿ, ಜನ ಸಂಖ್ಯೆಗನುಗುಣವಾಗಿ ಪ್ರತಿ ವ್ಯಕ್ತಿಗೆ 135 ಲೀಟರ್ ನೀರು ಸರಬರಾಜು ಮಾಡುವಂತೆ ತೀರ್ಮಾನಿಸಲಾಯಿತು. ಇನ್ನುಳಿದಂತೆ ರೂ. 12 ಕೋಟಿ ವಾರ್ಡ್‍ಗಳ ಅಭಿವೃದ್ಧಿಗೆ ಹಾಗೂ ರೂ. 5 ಕೋಟಿ ಪರಿಶಿಷ್ಟ ಜಾತಿಗೆ ರೂ. 2 ಕೋಟಿ, ಪರಿಶಿಷ್ಟ ಪಂಗಡದವರಿಗೆ ಮೀಸಲಿರಿಸಲಾಗಿದೆ.

ಕಲ್ಲು ಹಗರಣ ತನಿಖೆಗೆ : ಮಡಿಕೇರಿ ನಗರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳು ನಡೆಯುವ ಸಂಬಂಧ ಈ ಹಿಂದೆ ಬಳಸಲಾಗಿದ್ದ ಸೈಜು ಕಲ್ಲುಗಳನ್ನು ತೆರವುಗೊಳಿಸಿ ಕೆಲವರು ತಮ್ಮ ಮನೆಗಳಿಗೆ ಸಾಗಾಟ ಮಾಡಿದ್ದು, ಈ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ವಿಚಾರ ಪ್ರಸ್ತಾಪ ಮಾಡಿದ ಸದಸ್ಯ ಅಮೀನ ಮೊಹಿಸಿನ್ ಅವರು ಜಿಲ್ಲಾ ಕ್ರೀಡಾಂಗಣದಲ್ಲಿದ್ದ ಅಡಿಪಾಯವನ್ನು ತೆರವುಗೊಳಿಸಿದ ಬಳಿಕ ಕಲ್ಲುಗಳನ್ನು ಅಧಿಕಾರಿಯ ಮನೆಗೆ ಕೊಂಡೊಯ್ದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಸಮಜಾಯಿಷಿಕೆ ನೀಡಿದ ಆರೋಗ್ಯ ನಿರೀಕ್ಷಕ ರಮೇಶ್ ಅವರು, ಕಲ್ಲನ್ನು ಎಸೆಯುವದು ಬೇಡವೆಂದು ಮನೆಗೆ ಕೊಂಡೊಯ್ದಿದ್ದು, ನಗರಸಭೆಗೆ ಸೇರಿದ್ದೆಂದು ತಿಳಿದ ಬಳಿಕ ವಾಪಸ್ ತಂದು ಹಾಕಿರುವದಾಗಿ ಹೇಳಿದರು.

ಇದನ್ನು ಖಂಡಿಸಿದ ಮೊಹಿಸಿನ್, ಮನ್ಸೂರ್, ಇನ್ನಿತರರು ಇದು ಖಂಡನೀಯವಾಗಿದ್ದು, ಖಾಸಗಿ ಬಸ್ ನಿಲ್ದಾಣದ ಬಳಿ ಕಲ್ಲು, ಮಹದೇವಪೇಟೆಯ ಚಪ್ಪಡಿ ಕಲ್ಲು ಕೂಡ ಕಾಣೆಯಾಗಿದೆ. ಈ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಿದರು. ನಗರ ಸಭೆಯಲ್ಲಿ ಹಗರಣಗಳೇ ಹೆಚ್ಚಾಗುತ್ತಿದೆ. ನಿರ್ಣಯಗಳಿಗೆ ಯಾವದೇ ಬೆಲೆ ಇಲ್ಲದಂತಾಗಿದೆ ಎಂದು ತಜಸ್ಸುಂ ಹೇಳಿದರು.

ಈ ಸಂದರ್ಭ ಚರ್ಚೆಗಿಳಿದ ಬಿಜೆಪಿ ಸದಸ್ಯರು ಈ ಹಿಂದೆ ಕೂಡ ಇದೇ ರೀತಿ ಕಲ್ಲುಗಳನ್ನು ಸದಸ್ಯರೋರ್ವರು ಮನೆಗೆ ಸಾಗಾಟ ಮಾಡಿದ್ದು, ಈ ಬಗ್ಗೆ ಕೂಡ ತನಿಖೆಯಾಗಬೇಕೆಂದು ಪಟ್ಟು ಹಿಡಿದರು. ಸುದೀರ್ಘ ಚರ್ಚೆ ನಡೆದು ತನಿಖೆಗೆ ತೀರ್ಮಾನಿಸಲಾಯಿತು.

ನೀರು ಸರಬರಾಜು ವ್ಯವಸ್ಥೆಯಡಿ ಹೊರ ಜಿಲ್ಲೆಯವರಿಗೆ ಗುತ್ತಿಗೆ ನೀಡದೆ ಸ್ಥಳೀಯರಿಗೆ ನೀಡುವಂತಾಗಬೇಕೆಂದು ಸದಸ್ಯರುಗಳು ಆಗ್ರಹಿಸಿದರು.

ಕಸ ಸಮಸ್ಯೆ : ಸದಸ್ಯ ರಮೇಶ್ ಮಾತನಾಡಿ, ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ತೊಟ್ಟಿಗಳು ತುಂಬಿ ತುಳುಕುತ್ತಿರುತ್ತವೆ. ಕೆಲವು ಕಡೆಗಳಲ್ಲಿ ಟ್ರ್ಯಾಕ್ಟರ್‍ಗಳು ಹೋಗುತ್ತಿಲ್ಲವೆಂದು ಸಭೆಯ ಗಮನ ಸೆಳೆದರು. ಸದಸ್ಯ ಉಣ್ಣಿಕೃಷ್ಣ ಮಾತನಾಡಿ, ಒಂದು ಸ್ತ್ರೀಶಕ್ತಿ ಗುಂಪಿಗೆ 5 ಟ್ರ್ಯಾಕ್ಟರ್‍ಗಳನ್ನು ನೀಡಲಾಗಿದ್ದು, ಅವರುಗಳಿಗೆ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಬೇರೆಯವರಿಗೆ ನೀಡಬೇಕೆಂದು ಆಗ್ರಹಿಸಿದರು. ಸದಸ್ಯ ತಜುಸ್ಸುಂ ಮಾತನಾಡಿ, ಟ್ರ್ಯಾಕ್ಟರ್ ಬಾರದ ಬಗ್ಗೆ ವಿಚಾರಿಸಿದರೆ ಏನಾದರೊಂದು ನೆಪ ಹೇಳುತ್ತಾರೆ. ಕಸ ವಿಲೇವಾರಿ ಆಗುತ್ತಿಲ್ಲವೆಂದು ಆರೋಪಿಸಿದರು. ಈ ಬಗ್ಗೆ ಟೆಂಡರ್ ಮೂಲಕ ಇತರ ಸ್ತ್ರೀಶಕ್ತಿ ಗುಂಪುಗಳಿಗೂ ನೀಡಲು ತೀರ್ಮಾನಿಸಲಾಯಿತು.

ಇನ್ನುಳಿದಂತೆ ಇದರ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.