ಮಡಿಕೇರಿ, ಮೇ 9: ಬಣ್ಣ ಬಣ್ಣದ ಚಿತ್ತಾರ, ಪ್ರಾಣಿ, ಪಕ್ಷಿ, ಪರಿಸರ, ಜಾನಪದ ಕಲೆ, ಗೊಂಬೆಯ ಚಿತ್ರ ಕಲೆ, ಹೀಗೆ ನಾನಾ ರೀತಿಯ ಕಲಾ ಚಿತ್ರಗಳು, ಹಾಡುಗಾರಿಕೆ, ಪ್ರಬಂಧ, ಆಶುಭಾಷಣ ಸ್ಪರ್ಧೆ ಹೀಗೆ ನಾನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ದೃಶ್ಯಗಳು ನೋಡುಗರ ಮನರಂಜಿಸಿದವು. ಇದು ಕಳೆದ ಒಂದು ವಾರದಿಂದ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಭಾಂಗಣದಲ್ಲಿ ಗಿರಿಜನ ಆಶ್ರಮ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಚಿಣ್ಣರ ಮೇಳ ಬೇಸಿಗೆ ಶಿಬಿರದಲ್ಲಿ ಕಂಡುಬಂದ ದೃಶ್ಯಗಳು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆ ವತಿಯಿಂದ ಜಿಲ್ಲೆಯ 11 ಗಿರಿಜನ ಆಶ್ರಮ ಶಾಲೆ ಹಾಗೂ 8 ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗಾಗಿ ಒಂದು ವಾರಗಳ ಕಾಲ ಏರ್ಪಡಿಸಲಾಗಿದ್ದ ಚಿಣ್ಣರ ಮೇಳ ಬೇಸಿಗೆ ಶಿಬಿರದಲ್ಲಿ ಒಟ್ಟು 100 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಬೇಸಿಗೆ ಅವಧಿಯಲ್ಲಿ ಪಠ್ಯೇತರ ಚಟುವಟಿಕೆಗಳಾದ ಹಾಡುಗಾರಿಕೆ, ಚಿತ್ರಕಲೆ ಮತ್ತಿತರ ಚಟುವಟಿಕೆಗಳನ್ನು ಕೈಗೊಂಡು ವಿದ್ಯಾರ್ಥಿಗಳ ಮಾನಸಿಕ ಮತ್ತು ಭೌದ್ಧಿಕ ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗುವಂತಹ ವಾತಾವರಣ ನಿರ್ಮಿಸಲು ಈ ಚಿಣ್ಣರ ಮೇಳ ಬೇಸಿಗೆ ಶಿಬಿರ ಆಯೋಜಿಸಲಾಗಿತ್ತು.

ಇಂದು ನಡೆದ ಸಮಾರೋಪ ಸಮಾರಂಭದಲ್ಲಿ ತಿತಿಮತಿ ಆಶ್ರಮ ಶಾಲೆಯ ವಿದ್ಯಾರ್ಥಿನಿ ಜ್ಯೋತಿ ಲಕ್ಷ್ಮೀ ಚಿಣ್ಣರ ಮೇಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಳುಕು ಇತ್ತು, ಕಳೆದ ಒಂದು ವಾರದಿಂದ ವಿವಿಧ ರೀತಿಯ ಸಾಂಸ್ಕøತಿಕ ಹಾಗೂ ಜಾನಪದ ಚಟುವಟಿಕೆಗಳನ್ನು ಹೇಳಿಕೊಡುವ ಮೂಲಕ ಸದಾ ಕ್ರಿಯಾಶೀಲತೆಯಿಂದ ಇರುವಂತಾಗಲು ಬೇಸಿಗೆ ಶಿಬಿರ ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಳು.

ಪೆರಾಜೆ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ಚಂದನ್ ‘ವಿದ್ಯಾರ್ಜನೆ, ಕ್ರೀಡೆ, ಚಿತ್ರಕಲೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಲು ಚಿಣ್ಣರ ಮೇಳ ಸಹಕಾರಿಯಾಗಿದೆ’ ಎಂದು ಹೇಳಿದರು. ವಿದ್ಯಾರ್ಥಿನಿ ಸಿಂಧೂ ‘ಚಿಣ್ಣರ ಮೇಳದಲ್ಲಿ ಬದುಕಿನ ಪಾಠವನ್ನು ಕಲಿಸಿದ್ದಾರೆ’ ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದರು.

ಗುಡ್ಡೆಹೊಸೂರು ಗ್ರಾ.ಪಂ.ಅಧ್ಯಕ್ಷೆÀ ಭಾರತಿ ಮಾತನಾಡಿ ಬುದ್ದಿಮತ್ತೆ ಪ್ರತಿಯೊಬ್ಬರಲ್ಲೂ ಒಂದೇ ರೀತಿ ಇರುತ್ತದೆ. ಆದರೆ ಮಕ್ಕಳನ್ನು ಬೆಳೆಸುವ ರೀತಿ ಮತ್ತು ಪರಿಸರವು ಮಕ್ಕಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಆದಿವಾಸಿ ಮಕ್ಕಳು ಉನ್ನತ ಶಿಕ್ಷಣ ಪಡೆಯುವಂತಾಗಬೇಕು. ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.

ಲ್ಯಾಂಪ್ ಸೊಸೈಟಿ ನಿರ್ದೇಶಕ ಆರ್.ಕೆ.ಚಂದ್ರು ಮಾತನಾಡಿ ಆದಿವಾಸಿ ವಿದ್ಯಾರ್ಥಿಗಳು ವಿದ್ಯಾರ್ಜನೆಯತ್ತ ಹೆಚ್ಚು ಒತ್ತು ನೀಡಬೇಕು. ನಾಗರಿಕ ಸೇವಾ ಸ್ಪರ್ಧೆ ಎದುರಿಸಿ ಉನ್ನತ ಹುದ್ದೆ ಪಡೆಯುವಂತಾಗಬೇಕು ಎಂದು ಹೇಳಿದರು. ಲ್ಯಾಂಪ್ ಸೊಸೈಟಿ ನಿರ್ದೇಶಕ ಮೋಹನ್ ಮಾತನಾಡಿ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ವಿದ್ಯಾರ್ಜನೆ ಜೊತೆಗೆ ಸಾಂಸ್ಕøತಿಕ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು. ಚಿಣ್ಣರ ಮೇಳ ನಿರ್ದೇಶಕ ಜೀವನ್‍ರಾಂ ಸುಳ್ಯ ಮಾತನಾಡಿ ಮಕ್ಕಳ ಮಾನಸಿಕ ಮತ್ತು ಭೌದ್ಧಿಕ ಬೆಳವಣಿಗೆಗೆ ಪೂರಕವಾದ ಹಲವು ಚಟುವಟಿಕೆಗಳ ಮಾಹಿತಿ ತಿಳಿಸಲಾಗಿದೆ ಎಂದುಹೇಳಿದರು.

ಚಿಣ್ಣರ ಮೇಳದಲ್ಲಿ ಜಾದು, ಗೊಂಬೆ ತಯಾರಿಕೆ, ಚಿತ್ರಕಲೆ, ಗ್ಲಾಸ್ ಪೇಯಿಂಟಿಂಗ್, ಗ್ರೀಟಿಂಗ್ಸ್, ಪರಿಸರ ಜಾಗೃತಿ, ರಂಗ ಅಭಿನಯ, ಮನರಂಜನಾ ಆಟಗಳು, ಜನಪದ ಹಾಡು, ರಂಗಗೀತೆ, ನಾಟಕ, ಆರೋಗ್ಯ ಶಿಕ್ಷಣ ಇತರ ವಿಚಾರಗಳ ಬಗ್ಗೆ ತಿಳಿಸಲಾಗಿದೆ ಎಂದರು.

ಗಿರಿಜನ ಮುಖಂಡ ಜೆ.ಕೆ.ಪ್ರಕಾಶ್ ಮಾತನಾಡಿ ಆದಿವಾಸಿಗಳ ಮಕ್ಕಳ ಕಲಿಕೆಗೊಂದು ವೇದಿಕೆ ನಿರ್ಮಾಣ ಮಾಡಿರುವದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ.ಮೌಲ್ಯ ಜೀವನ್‍ರಾಂ, ನಿಲಯ ಮೇಲ್ವಿಚಾರಕ ನಿಂಗರಾಜು ಇತರರು ಇದ್ದರು, ಐಟಿಡಿಪಿ ಇಲಾಖೆಯ ರಂಗನಾಥ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಜನಾರ್ಧನ, ಹರೀಶ್, ತಾರಾನಾಥ್, ನವೀನ್, ಶಿವಗಿರಿ ಕಲ್ಲಡ್ಕ, ಭಾಸ್ಕರ್ ನೆಲ್ಯಾಡಿ, ಚಂದ್ರ ಅಡ್ಕಾರ್, ಪಟ್ಟಾಭಿರಾಮ, ಅಶ್ವಿನಿ ರಾಜೇಶ್, ಭಗೀರಥ ಕುಮ್ಮಟ, ಕಮಲಾಕ್ಷ, ವಾಮನ ಇತರರು ಚಿಣ್ಣರ ಮೇಳ ನಡೆಸಿಕೊಟ್ಟರು.