*ಗೋಣಿಕೊಪ್ಪಲು, ಮೇ 9: ತಮ್ಮ ಪಾರಂಪರಿಕ ವ್ಯವಸಾಯ ದೊಂದಿಗೆ ಜೇನು ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳುವವರ ಸಂಖ್ಯೆಗೇನು ಜಿಲ್ಲೆಯಲ್ಲಿ ಕೊರತೆಯಿಲ್ಲ. ಕಳೆದ 17 ವರ್ಷಗಳಿಂದ ಲಾಭದಾಯಕ ಜೇನು ಕೃಷಿಯಲ್ಲಿ ತೃಪ್ತಿಪಟ್ಟುಕೊಂಡವರ ಸಾಲಿನಲ್ಲಿ ಭಾಗಮಂಡಲ ಸಮೀಪದ ಚೇರಂಗಾಲದ ಮೊಟ್ಟನ ಯಶೋಧರ ಅವರು ಒಬ್ಬರಾಗಿದ್ದಾರೆ.ತಮ್ಮ ಮನೆಯಲ್ಲಿ 10ರಿಂದ 20 ಜೇನು ಪೆಟ್ಟಿಗೆಯನ್ನಿಟ್ಟು ಜೇನು ಕೃಷಿಯಲ್ಲಿ ತೊಡಗಿದ ಯಶೋಧರ ಅವರು, ಇದೊಂದು ಲಾಭದಾಯಕ ಕೃಷಿ ಎಂದು ಒಪ್ಪಿಕೊಳ್ಳುತ್ತಾರೆ. ಇದರೊಂದಿಗೆ ಕೊಡಗಿನಲ್ಲಿ ಈ ಹಿಂದಿದ್ದ ಮಡಿಕೆ ಜೇನು ತಯಾರಿಕೆ ಇವರ ವಿಶೇಷತೆಯಾಗಿದೆ.

ಮೂಲತ: ವ್ಯವಸಾಯ ಗಾರರಾಗಿರುವ ಯಶೋಧರ ಅವರಿಗೆ ಜೇನು ಕೃಷಿ ತಮ್ಮ ತಂದೆಯ ತಲೆಮಾರಿನಿಂದಲೇ ಬಳುವಳಿಯಾಗಿ ಬಂದಿದೆ. ಅದನ್ನು ಈಗಲೂ ಮುಂದುವರಿಸಿಕೊಂಡು ಬಂದಿರುವ ಇವರು, ಜೇನು ಕೃಷಿಗೆ ಕಾಲಕ್ಕನುಗುಣವಾದ ಆಧುನಿಕತೆಯ ಸ್ವರ್ಶ ನೀಡಿದ್ದಾರೆ. ಪೆಟ್ಟಿಗೆ ಜೇನನ್ನು ಅವಧಿ ಮುಗಿದ ಕೂಡಲೇ ಹೊರತೆಗೆಯುವ ಇವರು ಅದನ್ನು ಆಧುನಿಕ ಯಂತ್ರದ ಸಹಾಯದಿಂದ ಬೇರ್ಪಡಿಸಿ, ಬಾಟಲಿಯಲ್ಲಿ ಸಂರಕ್ಷಿಸುತ್ತಾರೆ.

ಜೇನು ಕೃಷಿ ಉತ್ತಮ ಆದಾಯ ಉಳ್ಳದ್ದಾಗಿದೆ. ಆದರೆ ಈ ಆದಾಯ ಪಡೆಯಲು ಆಸಕ್ತಿ, ಶ್ರಮ, ಕಾಳಜಿ ಮತ್ತು ಬದ್ಧತೆ ತೀರ ಅಗತ್ಯ ಎಂದು ಹೇಳುವ ಮೊಟ್ಟನ ಯಶೋಧರ ಅವರು, ಜೇನು ಕೃಷಿಯನ್ನು ನಾಮಕಾವಸ್ಥೆಗೆ ಸೀಮಿತಪಡಿಸದೆ ಹೆಚ್ಚಿನ ಮುತುವರ್ಜಿಯಿಂದ ಮಾಡಿದರೆ ಲಾಭ ಶÀತಸಿದ್ದ ಎಂದು ಅಭಿಪ್ರಾಯಪಡುತ್ತಾರೆ.

ತಾವು ತಯಾರಿಸುವ ಜೇನಿನಲ್ಲಿ ಯಾವದೇ ಕಲಬೆರಕೆ ಇರುವದಿಲ್ಲ. ಇದರಿಂದಾಗಿ ಈ ಜೇನಿಗೆ ತುಂಬಾ ಬೇಡಿಕೆ ಇದೆ. ಒಮ್ಮೊಮ್ಮೆ ಬೇಡಿಕೆಯಷ್ಟು ಜೇನನ್ನು ತಮ್ಮಿಂದ ಉತ್ಪಾದಿಸಲು ಸಾಧ್ಯವಾಗುವದಿಲ್ಲ. ಅದಕ್ಕೆ ಕೊಡಗಿನ ಕಾಲಾವಸ್ಥೆಯೂ ಪ್ರಮುಖ ಕಾರಣ ಎಂದು ಹೇಳುವ ಯಶೋಧರ, ಮಳೆಗಾಲದಲ್ಲಿ ಜೇನು ಕೃಷಿ ಕುಂಠಿತಗೊಳ್ಳುತ್ತದೆ ಎಂದು ನುಡಿಯುತ್ತಾರೆ.

ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ಅಪರೂಪಕ್ಕೆ ಸಿಗುವ ಜೇನು ತುಂಬಾ ರುಚಿಕರ ಮತ್ತು ಸ್ವಾದಿಷ್ಟವಾಗಿರುತ್ತದೆ. ಈ ಅವಧಿಯಲ್ಲಿನ ಜೇನಿನ 750 ಮಿ.ಲೀ ಅಳತೆಯ ಬಾಟಲಿಗೆ ರೂ.1000 ರಿಂದ 1200ರವರೆಗೆ ದರ ನಿಗದಿ ಯಾಗುತ್ತದೆ. ಪ್ರವಾಸಿಗರ ಬಾಯಿಮಾತಿನ ಪ್ರಚಾರದಿಂದಾಗಿ ಮೈಸೂರು, ಬೆಂಗಳೂರು ಭಾಗದಲ್ಲಿ ತಮ್ಮ ಜೇನಿಗೆ ಹೆಚ್ಚು ಬೇಡಿಕೆ ಇದ್ದು, ದೂರವಾಣಿ ಮೂಲಕ ತಮ್ಮನ್ನು ಸಂಪರ್ಕಿಸಿ ಜೇನನ್ನು ತರಿಸಿ ಕೊಳ್ಳುತ್ತಾರೆ ಎಂಬದು ಯಶೋಧರ ಅವರ ಅಭಿಮಾನದ ಮಾತು.

ಡಿಸೆಂಬರ್‍ನಿಂದ ಮೇ ತಿಂಗಳಿನವರೆಗೆ ಭಾಗಮಂಡಲ ವ್ಯಾಪ್ತಿಯಲ್ಲಿ ಜೇನು ಕೃಷಿಗೆ ಸಕಾಲವಾಗಿದ್ದು, ಈ ಅವಧಿಯಲ್ಲಿ ಹೆಚ್ಚು ಜೇನು ಉತ್ಪಾದಿಸಲು ಸಾಧ್ಯವಿದೆ. ಕಾಲಾವಸ್ಥೆಗೆ ತಕ್ಕಂತೆ ತೋಟ ಕಾಡುಗಳಲ್ಲಿರುವ ಮರ-ಗಿಡಗಳಲ್ಲಿ ಕಾಣಿಸಿಕೊಳ್ಳುವ ಹೂವಿನ ಮಕರಂದದ ವ್ಯತ್ಯಾಸದಿಂದ ಜೇನಿನ ರುಚಿಯೂ ಬದಲಾಗುತ್ತದೆ. ಒಂದೊಂದು ಅವಧಿಯ ಜೇನಿಗೆ ಒಂದೊಂದು ರೀತಿಯ ರುಚಿ ಇರುತ್ತದೆ ಎಂದು ತಮ್ಮ ಅನುಭವ ಹಂಚಿಕೊಂಡ ಯಶೋಧರ ಅವರು, ಕಾಫಿ ಗಿಡದ ಹೂವಿನ ಮಕರಂಧದಿಂದ ತಯಾರಾಗುವ ಜೇನು ಅಷ್ಟೇನು ರುಚಿ ಇರುವದಿಲ್ಲ ಎಂದು ಹೇಳುತ್ತಾರೆ. ಕಲಬೆರಕೆ ಇಲ್ಲದ ಜೇನು ಗರಿಷ್ಠ 2 ವರ್ಷಗಳ ಕಾಲ ಸಂರಕ್ಷಿಸಿದರೂ ಯಾವದೇ ಹಾನಿಯಾಗುವದಿಲ್ಲ ಎಂಬದು ಇವರ ಅಭಿಪ್ರಾಯ.

-ಎನ್.ಎನ್. ದಿನೇಶ್