ಬೆಂಗಳೂರು, ಮೇ 9: ದಿಡ್ಡಳ್ಳಿ ಮೀಸಲು ಅರಣ್ಯದಲ್ಲಿನ ನಿರಾಶ್ರಿತರ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಎ.ಕೆ. ಸುಬ್ಬಯ್ಯ ಸೇರಿದಂತೆ ಅವರ ಜೊತೆಯಲ್ಲಿ ಕೆಲವು ಕಾಣದ ಕೈಗಳು ಸೇರಿಕೊಂಡು ಗೊಂದಲ ಸೃಷ್ಟಿಸುತ್ತಿರುವದಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಆಕ್ಷೇಪಿಸಿದ್ದಾರೆ.ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಸುಬ್ಬಯ್ಯ ಅವರ ಜೊತೆ ಕೆಲವು ಕಾಣದ ಕೈಗಳು ಸೇರಿಕೊಂಡು ಪ್ರಚೋದನೆ ನೀಡುತ್ತಿವೆ. ಎಲ್ಲರೂ ಸೇರಿ ನಿರಾಶ್ರಿತರ ದಾರಿ ತಪ್ಪಿಸುತ್ತಿದ್ದಾರೆ. ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದರೂ ಸುಬ್ಬಯ್ಯ ಕೇಳುತ್ತಿಲ್ಲ ಎಂದು ತಿಳಿಸಿದರು.

ದಿಡ್ಡಳ್ಳಿ ನಿರಾಶ್ರಿತರ ಪ್ರದೇಶ ಅರಣ್ಯ ಭೂಮಿ ಆಗಿರುವದರಿಂದ ಅವರನ್ನು ಅಲ್ಲಿಂದ ಸ್ಥಳಾಂತರಿಸುವದು ಅನಿವಾರ್ಯ ಎಂದರು. ಈ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಬಸವನಹಳ್ಳಿ, ಸಿದ್ದಾಪುರ ಮತ್ತು ಕೆದಮುಳ್ಳೂರು ಬಳಿ ಎಲ್ಲ ಸೌಲಭ್ಯಗಳನ್ನು ಒಳಗೊಂಡಿರುವ 700 ನಿವೇಶನಗಳನ್ನು ಸಿದ್ಧಪಡಿಸಲಾಗಿದೆ. ಲಾಟರಿ ಮೂಲಕ ಈಗಾಗಲೇ 650 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಅಧಿಸೂಚನೆ ಹೊರಡಿಸುವದಷ್ಟೇ ಬಾಕಿ ಇದೆ ಎಂದು ವಿವರಿಸಿದರು.

ಎರಡು ದಿನಗಳ ಹಿಂದೆ ನಿರಾಶ್ರಿತರನ್ನು ದಿಡ್ಡಳ್ಳಿ ಅರಣ್ಯ ಭೂಮಿಯಿಂದ ಖಾಲಿ ಮಾಡಿಸಿ ಬ್ಯಾಡಗೊಟ್ಟ, ಬಸವನಹಳ್ಳಿ ಎಂಬಲ್ಲಿಗೆ ಸ್ಥಳಾಂತರ ಮಾಡಲಾಗಿದೆ. ನಿರ್ವಸತಿಗರನ್ನು ನಮ್ಮ ಕ್ಷೇತ್ರಗಳಿಗೆ ಕಳುಹಿಸಿದ್ದೀರಿ ಎಂದು ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಮತ್ತು ಕೆ.ಜಿ. ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.

ತಾ. 15 ರ ನಂತರ ಸಭೆ

ದಿಡ್ಡಳ್ಳಿ ನಿರಾಶ್ರಿತರೊಂದಿಗೆ ತಾ. 15 ರ ನಂತರ ಮತ್ತೊಮ್ಮೆ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಅರಣ್ಯ ಪ್ರದೇಶದ ಜಾಗ ಖಾಲಿ ಮಾಡಿ ಸರಕಾರ ಸೂಚಿಸಿದ ಸ್ಥಳಗಳಿಗೆ ತೆರಳುವಂತೆ ಮತ್ತೊಮ್ಮೆ ಮನವೊಲಿಸಲಾಗುವದು ಎಂದರು.