ನಾಪೆÇೀಕ್ಲು, ಮೇ. 9: ಕೊಡವ ಕುಟುಂಬಗಳ ನಡುವಿನ 21ನೇಯ ವಾರ್ಷಿಕ ಹಾಕಿ ಉತ್ಸವದ ಕ್ವಾರ್ಟರ್ ಫೈನಲ್ ಹಂತಕ್ಕೆ ಮಾಜಿ ಚಾಂಪಿಯನ್‍ಗಳಾದ ಪಳಂಗಂಡ, ಅಂಜಪರವಂಡ, ಕೂತಂಡ ಹಾಗೂ ಪರದಂಡ ಕುಟುಂಬ ತಂಡ ಪ್ರವೇಶ ಪಡೆದಿವೆ. ಇಂದು ನಡೆದ ಪ್ರೀಕ್ವಾರ್ಟರ್ ಫೈನಲ್‍ನಲ್ಲಿ ಪಳಂಗಂಡ ತಂಡ ಕೊಂಗೇಟಿರ ತಂಡವನ್ನು ಪರದಂಡ ತಂಡ ಮೇಕೇರಿರ ತಂಡವನ್ನು ಅಂಜಪರವಂಡ ಕುಟುಂಬ ಬಾಳೆಯಡ ತಂಡವನ್ನು ಹಾಗೂ ಕೂತಂಡ ತಂಡ ಕೋಡಿಮಣಿಯಂಡ ತಂಡವನ್ನು ಪರಾಭವಗೊಳಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದವು.
ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ 21ನೇ ವರ್ಷದ ಬಿದ್ದಾಟಂಡ ಕಪ್ ಹಾಕಿ ನಮ್ಮೆಯ ಇಪ್ಪತ್ತಮೂರನೇ ದಿನದ ಪಂದ್ಯಾಟದಲ್ಲಿ ಇಂದು ಪ್ರಿಕ್ವಾರ್ಟರ್ ಹಂತದ ಪಂದ್ಯ ನಡೆಯಿತು.
ಪಳಂಗಂಡ ಮತ್ತು ಕೊಂಗೇಟಿರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಪಳಂಗಂಡ ತಂಡವು 5-2 ಗೋಲಿನ ಅಂತರದಿಂದ ಕೊಂಗೇಟಿರ ತಂಡವನ್ನು ಮಣಿಸಿತು. ಕೊಂಗೇಟಿರ ತಂಡದ ಪರ ಸಾವನ್ 22ನೇ ನಿಮಿಷದಲ್ಲಿ, ಅಕ್ಕಮ್ಮ 49ನೇ ನಿಮಿಷದಲ್ಲಿ ತಲಾ ಒಂದೊಂದು ಗೋಲು ದಾಖಲಿಸಿದರೆ, ಪಳಂಗಂಡ ತಂಡದ ಪರ ಕಾಳಪ್ಪ 2ನೇ ನಿಮಿಷದಲ್ಲಿ, ಪ್ರಜ್ವಲ್ ಬೆಳ್ಯಪ್ಪ 10ನೇ ನಿಮಿಷದಲ್ಲಿ, ಪ್ರಧಾನ್ 19ನೇ ನಿಮಿಷದಲ್ಲಿ, ಅಜಯ್ 28ನೇ ನಿಮಿಷದಲ್ಲಿ, ಅಮರ್ 29ನೇ ನಿಮಿಷದಲ್ಲಿ ತಲಾ ಒಂದೊಂದು ಗೋಲು ದಾಖಲಿಸುವದರ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಪರದಂಡ ಮತ್ತು ಮೇಕೇರಿರ ತಂಡಗಳ ನಡುವಿನ ಪಂದ್ಯದಲ್ಲಿ ಪರದಂಡ ತಂಡವು 2-1 ಗೋಲಿನ ಅಂತರದಿಂದ ಮೇಕೇರಿರ ತಂಡವನ್ನು ಮಣಿಸಿತು. ಮೇಕೇರಿರ ನಿತಿನ್ ತಿಮ್ಮಯ್ಯ 33ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿದರೆ, ಪರದಂಡ ಕೀರ್ತಿ ಮೊಣ್ಣಪ್ಪ 9ನೇ ನಿಮಿಷದಲ್ಲಿ, ಪ್ರಜ್ವಲ್ ಪೂವಣ್ಣ 25ನೇ ನಿಮಿಷದಲ್ಲಿ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.
ಅಂಜಪರವಂಡ ಮತ್ತು ಬಾಳೆಯಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಅಂಜಪರವಂಡ ತಂಡವು 4-2 ಗೋಲಿನ ಅಂತರದಿಂದ ಬಾಳೆಯಡ ತಂಡದ ವಿರುದ್ಧ ಗೆಲುವು ಸಾಧಿಸಿತು. ಬಾಳೆಯಡ ನವೀನ್ 5ನೇ ನಿಮಿಷದಲ್ಲಿ, ಮಿಲನ್ 44ನೇ ನಿಮಿಷದಲ್ಲಿ ತಲಾ ಒಂದೊಂದು ಗೋಲು ದಾಖಲಿಸಿದರೆ, ಅಂಜಪರವಂಡ ಹೇಮಂತ್ 5ನೇ ನಿಮಿಷದಲ್ಲಿ, ವಿನಯ್ 8ನೇ ನಿಮಿಷದಲ್ಲಿ, ಸುಬ್ಬಯ್ಯ 18ನೇ ನಿಮಿಷದಲ್ಲಿ, ಅಬಿನ್ ಚಿಟ್ಟಿಯಪ್ಪ 50ನೇ ನಿಮಿಷದಲ್ಲಿ ತಲಾ ಒಂದೊಂದು ಗೋಲು ದಾಖಲಿಸಿ ದರು. ಕೂತಂಡ ಮತ್ತು ಕೋಡಿಮಣಿಯಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕೂತಂಡ ತಂಡವು 6-0 ಗೋಲಿನ ಅಂತರದಿಂದ ಕೋಡಿಮಣಿಯಂಡ ತಂಡವನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕೂತಂಡ ತಂಡದ ಪರ ಸೋಮಣ್ಣ 11, 14 ಮತ್ತು 20ನೇ ನಿಮಿಷದಲ್ಲಿ ಮೂರು ಗೋಲು, ಗಣೇಶ್ 23 ಮತ್ತು 25ನೇ ನಿಮಿಷದಲ್ಲಿ ಎರಡು ಗೋಲು, ಬೋಪಣ್ಣ 15ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.
ತಾ. 10ರಂದು (ಇಂದು) ಕ್ವಾರ್ಟರ್ ಫೈನಲ್ ತಲುಪುವ ಇನ್ನು ನಾಲ್ಕು ತಂಡಗಳು ನಿರ್ಧಾರವಾಗಲಿದೆ.