ನಾಪೋಕ್ಲು, ಮೇ. 9: ಇಲ್ಲಿಗೆ ಸಮೀಪದ ಕೊಳಕೇರಿಯ ಬೊಮ್ಮಂಜೇರಿ ನಿವಾಸಿ ಹರೀಶ್ (30) ಎಂಬ ಯುವಕ ಇಂದು ಸಂಜೆ ತೀವ್ರ ಅಸ್ವಸ್ಥಗೊಂಡು ಇಲ್ಲಿನ ಆಸ್ಪತ್ರೆಗೆ ಕರೆತಂದ ವೇಳೆ ಮೃತಪಟ್ಟಿದ್ದಾರೆ.
ಹರೀಶ್ ಅಸ್ವಸ್ಥಗೊಂಡ ಬೆನ್ನಲ್ಲೇ ಸ್ಥಳೀಯ ಖಾಸಗಿ ವೈದ್ಯರ ಬಳಿ ಕರೆದೊಯ್ದಾಗ ಅವರು ಹೆಚ್ಚಿನ ಚಿಕಿತ್ಸೆಗಾಗಿ ಕೂಡಲೇ ಜಿಲ್ಲಾಸ್ಪತ್ರೆಗೆ ಸಾಗಿಸಲು ತಿಳಿಸಿದ್ದು, ಸಂಬಂಧಿಕರು ನಾಪೋಕ್ಲು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದಾರೆ. ಈ ವೇಳೆ ಡಾ. ಗಣೇಶ್‍ಕುಮಾರ್ ಶೆಟ್ಟಿ ಸಕಾಲದಲ್ಲಿ ಆಗಮಿಸಲಿಲ್ಲವೆಂದೂ, ಮಹಿಳಾ ವೈದ್ಯೆ ಡಾ. ಉಮಾ ಭಾರತಿ ಬಂದು ನೋಡಲಾಗಿ ಹರೀಶ್ ಮೃತಪಟ್ಟಿದ್ದಾಗಿ ಗೊತ್ತಾಗಿದೆ.ಸಕಾಲದಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದರೆ ಹರೀಶ ಬದುಕುಳಿಯುತ್ತಿದ್ದರೆಂದು, ಇಲ್ಲಿನ ಪ್ರಮುಖ ಬಿದ್ದಾಟಂಡ ರೋಝಿ ಚಿಣ್ಣಪ್ಪ ಹಾಗೂ ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೃದಯಾಘಾತದಿಂದ ಆತ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ವಿಷಯ ತಿಳಿದು ಕೊಡವ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಬಿ.ಟಿ. ದಿನೇಶ್ ಮೊದಲಾದವರು ಸ್ಥಳಕ್ಕೆ ಆಗಮಿಸಿ ಶವವನ್ನು ಸಂಬಂಧಿಕರು ಕೊಂಡೊಯ್ಯುವಲ್ಲಿ ಪರಿಸ್ಥಿತಿ ತಿಳಿಗೊಳಿಸಿದರು.