ಮಡಿಕೇರಿ, ಮೇ 9: ಇಲ್ಲಿನ ಮಹದೇವಪೇಟೆಯಲ್ಲಿರುವ ಐತಿಹಾಸಿಕ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಾರ್ಷಿಕ ಪ್ರತಿಷ್ಠಾಪನೋತ್ಸವ ಹಾಗೂ ಕಳೆದ 3 ದಿನಗಳಿಂದ ನಡೆಯುತ್ತಿದ್ದ ದೈವಿಕ ಕೈಂಕರ್ಯಗಳಿಗೆ ಇಂದು ವಿಶೇಷ ಮಹಾಪೂಜೆಯೊಂದಿಗೆ ತೆರೆ ಬಿದ್ದಿತು.
ಮೈಸೂರು ಚಾಮುಂಡಿಬೆಟ್ಟದ ಡಾ. ಶಶಿಶೇಖರ್ ದೀಕ್ಷಿತ್ ಹಾಗೂ ಸನ್ನಿಧಿ ಅರ್ಚಕ ಸತೀಶ್ ಭಟ್ ನೇತೃತ್ವದಲ್ಲಿ ದೈವಿಕ ಕೈಂಕರ್ಯಗಳೊಂದಿಗೆ ಶ್ರೀ ಚಂಡಿಕಾಯಾಗವನ್ನು ನೆರವೇರಿಸಲಾಯಿತು.
ತಾ. 7 ರಂದು ದೀಪಸ್ತಂಭ ಪ್ರತಿಷ್ಠಾಪನೆಯೊಂದಿಗೆ ಆರಂಭಗೊಂಡಿದ್ದ ದೈವಿಕ ಕೈಂಕರ್ಯಗಳು ಎರಡು ದಿನಗಳಿಂದ ಜರುಗಿದ ಚಂಡಿಕಾಯಾಗ ನಿನ್ನೆ ಪೂರ್ಣಗೊಂಡು, ಇಂದು ಮಹದೇವಪೇಟೆ ಶ್ರೀ ಕನ್ನಿಕಾ ಪರಮೇಶ್ವರಿ ಸನ್ನಿಧಿ ಹಾಗೂ ಶ್ರೀ ಚೌಡೇಶ್ವರಿ ಸನ್ನಿಧಿವರೆಗೆ ಉತ್ಸವಮೂರ್ತಿ ಮೆರವಣಿಗೆ ಬಳಿಕ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಿಗೆ ಮಂಟಪಪೂಜೆ, ಉಯ್ಯಾಲೆ ಸೇವೆ ಬಳಿಕ ಮಹಾಪೂಜೆಯೊಂದಿಗೆ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.
ಶ್ರೀ ಚೌಡೇಶ್ವರಿ ದೇವಿಯ ಮೆರವಣಿಗೆಯೊಂದಿಗೆ ಉಯ್ಯಾಲೆ ಸೇವೆ, ಮಹಾಪೂಜೆ ವೇಳೆ ಅಧಿಕ ಸಂಖ್ಯೆ ಮಾತೆಯರ ಸಹಿತ ಭಕ್ತರು ವಿಶೇಷ ಆರತಿ ಬೆಳಗುವ ಮೂಲಕ ಶ್ರದ್ಧಾ ಭಕ್ತಿಯೊಂದಿಗೆ ತೀರ್ಥ ಪ್ರಸಾದ ಸ್ವೀಕರಿಸಿ, ಶ್ರೀ ಚೌಡೇಶ್ವರಿಗೆ ಸಾಮೂಹಿಕ ‘ಬೋಪರಾಕ್’ನೊಂದಿಗೆ ಪ್ರಾರ್ಥಿಸಿದರು. ರಾತ್ರಿ ಮಹಾಪೂಜೆ ಮುನ್ನ ಲಲಿತ ಸಹಸ್ರನಾಮ, ಸಂಕೀರ್ತನೆ ನಡೆಯಿತು.
ಶ್ರೀ ಚೌಡೇಶ್ವರಿಗೆ ಅರ್ಪಣೆ
ಮಡಿಕೇರಿಯ ಐತಿಹಾಸಿಕ ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಸ್ಥಳೀಯ ನಿವಾಸಿ, ಡಿ.ಡಿ. ಕೇಶವ ಹಾಗೂ ಮನೆಯವರು ತಮ್ಮ ಮನೆ ಸಹಿತ ಎಂಟು ಸೆಂಟ್‍ಗಳಷ್ಟು ಜಾಗವನ್ನು ಇಂದು ದಾನಪತ್ರದೊಂದಿಗೆ ಸಮರ್ಪಿಸಿದರು.
ವಿಶೇಷ ವಾರ್ಷಿಕ ಮಹಾಪೂಜೆ ಸಂದರ್ಭ ಚೌಡೇಶ್ವರಿ ಸನ್ನಿಧಿಯಲ್ಲಿ ಡಿ. ಕೇಶವ ಅವರು, ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಗಜಾನನ ಅವರಿಗೆ ಭಕ್ತರ ಸಮ್ಮುಖದಲ್ಲಿ ದಾನಪತ್ರ ಹಸ್ತಾಂತರಿಸಿದರು. ದೇವಾಲಯ ಸನ್ನಿಧಿಯಲ್ಲಿ ನಗರಸಭೆಯ ಮಾಜಿ ಉಪಾಧ್ಯಕ್ಷೆಯಾಗಿರುವ ವಸಂತ ಕೇಶವ ಹಾಗೂ ಪತಿ ಕೇಶವ ದಂಪತಿ ಸಹಿತ ಮನೆ ಮಂದಿಗೆ ದೇವಾಲಯ ಸಮಿತಿ ಅಭಿವಂದಿಸಿ ದಾನ ಪತ್ರ ಸ್ವೀಕರಿಸಿದರು.