ಸೋಮವಾರಪೇಟೆ, ಮೇ 11: ತಾಲೂಕಿನ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕ-ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ. ತಾಲೂಕಿನ 5 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಪ್ರವರ್ಗ 1, 2ಎ, 2ಬಿ, 3ಎ,3ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಪ್ರವೇಶದ ಅರ್ಜಿಯೊಂದಿಗೆ ಜಾತಿ, ಆದಾಯ ದೃಢೀಕರಣ ಪತ್ರ, ಹಿಂದಿನ ಸಾಲಿನಲ್ಲಿ ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿ, ವಾಸ ಸ್ಥಳದ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಮತ್ತು ಪಾಸ್‍ಬುಕ್ ಜೆರಾಕ್ಸ್ ಪ್ರತಿ, ಪಾಸ್ ಪೋರ್ಟ್ ಅಳತೆಯ 3 ಭಾವಚಿತ್ರಗಳನ್ನು ಲಗತ್ತಿಸಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ಉಚಿತವಾಗಿ ಊಟ, ವಸತಿ, ನೋಟ್ ಪುಸ್ತಕ, ಸಮವಸ್ತ್ರ, ಇನ್ನಿತರ ಸೌಲಭ್ಯಗಳನ್ನು ನೀಡಲಾಗುವದು.

ವಿದ್ಯಾರ್ಥಿಗಳು ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ, ಶಿರಂಗಾಲ, ಕುಶಾಲನಗರ, ಆಲೂರು-ಸಿದ್ದಾಪುರ, ಸುಂಟಿಕೊಪ್ಪ, ಚೆಟ್ಟಳ್ಳಿಯ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಮತ್ತು ಆಲೂರು-ಸಿದ್ದಾಪುರದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ವಿವರಗಳಿಗೆ ಸೋಮವಾರಪೇಟೆಯ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಕಚೇರಿ ದೂರವಾಣಿ ಸಂಖ್ಯೆ 08276-284820ನ್ನು ಸಂಪರ್ಕಿಸಬಹುದಾಗಿದೆ. ಜೂನ್ 1 ರಿಂದ ಪ್ರವೇಶವನ್ನು ನೀಡಲಾಗುವದು. ಅರ್ಜಿ ಸಲ್ಲಿಸಲು 2017ರ ಜೂನ್ 10 ಕೊನೆಯ ದಿನಾಂಕವಾಗಿದೆ.