ಶ್ರೀಮಂಗಲ, ಮೇ 10: ಜಿಲ್ಲೆಯ ಕಂದಾಯ ಹಾಗೂ ಸರ್ವೆ ಇಲಾಖೆಯ ಕಚೇರಿಯಲ್ಲಿ ಸಾರ್ವಜನಿಕರಿಗೆ ಅನಗತ್ಯ ತೊಂದರೆ ಹಾಗೂ ಕಚೇರಿಗಳಲ್ಲಿ ಅವ್ಯವಸ್ಥೆ ಸರಿಪಡಿಸಲು ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗ ಅಧಿಕಾರಿಗಳಿಗೆ ಜಿಲ್ಲಾ ಭಾರತೀಯ ಕಿಸಾನ್ ಸಂಘ ಗಡುವು ನೀಡಿದ್ದ ಬೆನ್ನಲ್ಲೇ ವೀರಾಜಪೇಟೆ ತಹಶೀಲ್ದಾರರ ನೇತೃತ್ವದಲ್ಲಿ ಸಂಘದ ಪಧಾದಿಕಾರಿಗಳ ಸಭೆ ನಡೆಸಿ ಸಮಸ್ಯೆಗೆ ಸ್ಪಂದಿಸುವ ಭರವಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಲಾಗಿದೆ.ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಮಹದೇವಸ್ವಾಮಿ (ಮೊದಲ ಪುಟದಿಂದ) ನೇತೃತ್ವದಲ್ಲಿ, ಕಂದಾಯ ಹಾಗೂ ಸರ್ವೆ ಇಲಾಖೆಯ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳೊಂದಿಗೆ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ ಹಾಗೂ ಪದಾಧಿಕಾರಿ ಗಳೊಂದಿಗೆ ವಿಶೇಷ ಸಭೆ ಕರೆದು ಸಮಸ್ಯೆ ಬಗ್ಗೆ ವಿವರ ಪಡೆಯಲಾಯಿತು.
ಈ ಸಂದರ್ಭ ರಾಜೀವ್ ಬೋಪಯ್ಯ ಮಾತನಾಡಿ, ಕಂದಾಯ ಹಾಗೂ ಸರ್ವೆ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಮಿತಿಮೀರಿದೆ. ಜನರೆ ಬಂದು ತಮ್ಮ ಕೆಲಸ ಮಾಡಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ದಲ್ಲಾಳಿಗಳಿಂದ ಮುಕ್ತಗೊಳಿಸಬೇಕು. ಕಚೇರಿ ಯಲ್ಲಿರುವ ಗುಮಾಸ್ತರು ಹಾಗೂ ಅಧಿಕಾರಿಗಳೇ ಕೆಲವು ಕೆಲಸಗಳಿಗೆ ಇಂತಿಷ್ಟು ಎಂದು ಬೇಡಿಕೆ ಸಲ್ಲಿಸಿ ತಾವೇ ಸಂಬಂಧಿಸಿದ ಕಡತವನ್ನು ಹಿಡಿದುಕೊಂಡು ಕೆಲಸ ಮಾಡಿ ಕೊಡುತ್ತಿದ್ದಾರೆ. ಹೀಗಾದರೆ ಜನಸಾಮಾನ್ಯರ ಕೆಲಸ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.
ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಮಾಚಿಮಾಡ ಎಂ. ರವೀಂದ್ರ ಮಾತನಾಡಿ, ಕಂದಾಯ ಕಚೇರಿಯಲ್ಲಿ ಕಳೆದ 10 ವರ್ಷಗಳಿಂದ ಕಡತಗಳು ವಿಲೇವಾರಿಯಾಗದೆ ದೂಳು ಹಿಡಿದಿದೆ. ಆರ್.ಟಿ.ಸಿ.ಯಲ್ಲಿ ಪಿ-1, ಪಿ-2 ಸಕಾಲ ಯೋಜನೆಯಡಿ ಕಾಲ ನಿಗದಿಯಾಗಿರುವದಿಲ್ಲ. ಇದನ್ನು ತಹಶೀಲ್ದಾರರೇ ಮಾಡಬಹುದು. ಆದರೆ ಬಹಳಷ್ಟು ಈ ಸಮಸ್ಯೆ ಬಾಕಿ ಉಳಿದಿದೆ. ಆರ್.ಟಿ.ಸಿ. ಬೆಳೆ ಕಾಲಂನಲ್ಲಿ ಬೆಳೆಗಳನ್ನು ತಪ್ಪಾಗಿ ನಮೂದಿಸುವದು ಹಾಗೂ ನಮೂದಿಸದೆ ಇರುವದರಿಂದ ಬೆಳೆಗಾರರಿಗೆ ತೀವ್ರ ತೊಂದರೆ ಯಾಗಿದೆ. ಸರ್ವೆ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಯಾಗ ಬೇಕು. ಕಂದಾಯ ಅದಾಲತ್ಗಳಲ್ಲಿ ತೆಗೆದುಕೊಳ್ಳುವ ತೀರ್ಮಾನಗಳು ಅನುಷ್ಠಾನ ಆಗುತ್ತಿಲ್ಲ.
ಕಿಸಾನ್ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ನೂರೇರ ಮನೋಜ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ಬಿ.ಪಿ.ಎಲ್. ಕಾರ್ಡುಗಳನ್ನು ಅನರ್ಹರಿಗೆ ನೀಡಲಾಗುತ್ತಿದ್ದು, ಸರಕಾರದ ಸೌಲಭ್ಯ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದರು.
ಸಂಘದ ಯುವ ಪ್ರಮುಖ್ ದೇಯಂಡ ರತನ್ ಮಾತನಾಡಿ, ಕಾಫಿ ಬಹುವಾರ್ಷಿಕ ಬೆಳೆ, ಪ್ರತಿ ವರ್ಷ ಇದನ್ನು ಬದಲಾಯಿಸುವ ಅವಶ್ಯಕತೆ ಇಲ್ಲ. ಜಿಲ್ಲೆಯ ಆರ್.ಟಿ.ಸಿ.ಗಳಲ್ಲಿ ಕಾಫಿ, ಕರಿಮೆಣಸುಗಳನ್ನು ನಮೂದಿಸಬೇಕು. ಗದ್ದೆಗಳ ಆರ್.ಟಿ.ಸಿ.ಗಳಲ್ಲಿ ಭತ್ತ ಎಂದು ಖಾಯಂ ಆಗಿ ನಮೂದಿಸುವಂತೆ ಸಲಹೆ ನೀಡಿದರು.
ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ಮಹದೇವಸ್ವಾಮಿ ಹೋಬಳಿ ಕಚೇರಿಗಳಲ್ಲಿ ಆದಷ್ಟು ಜನರ ಸಮಸ್ಯೆಗೆ ಸ್ಪಂದಿಸಿ, ಸರಿಪಡಿಸಿದರೆ ಅದು ತಾಲೂಕು ಕಚೇರಿವರೆಗೆ ಬರುವದಿಲ್ಲ. ಜನರಿಗೆ ಸ್ಪಂದನೆ ಮಾಡಿ ಸಮಸ್ಯೆ ಬಗೆಹರಿಸಬೇಕು. ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಿಕೊಡುವದು ಕರ್ತವ್ಯ ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.
ಶಿರಸ್ತೇದಾರ್ ಕಡೇಮಾಡ ಚಿಣ್ಣಪ್ಪ ಮಾತನಾಡಿ, ಖಾತೆ ವರ್ಗಾವಣೆ 35 ದಿನಗಳಲ್ಲಿ ಆಗುತ್ತಿದೆ. ಯಾವ ಕಡತ ಎಲ್ಲಿ ತಡೆಯಾಗಿದೆ ಎಂದು ತಿಳಿಸಿದರೆ ಅದನ್ನು ಪರಿಶೀಲಿಸಿ ಸರಿಪಡಿಸುತ್ತೇವೆ ಎಂದರು.