ಕುಶಾಲನಗರ, ಮೇ 11: ಕುಶಾಲನಗರ ಒಳಚರಂಡಿ ಯೋಜನೆಯ ಕಾಮಗಾರಿ ಪರಿಶೀಲನೆಗೆ ಸದ್ಯದಲ್ಲಿಯೇ ಜನಪ್ರತಿನಿಧಿಗಳು, ಅಧಿಕಾರಿಗಳು ಕುಶಾಲನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ.

ಒಳಚರಂಡಿ ಕಾಮಗಾರಿ ಕೆಲವೆಡೆ ಅಸಮರ್ಪಕವಾಗಿರುವ ದೂರಿನ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಶಾಲನಗರ ಪಟ್ಟಣದಲ್ಲಿ ಕಳೆದ 2 ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ.

ಕಾಮಗಾರಿ ಪರಿಶೀಲನೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರು, ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು ಭೇಟಿ ನೀಡುವರು ಎಂದಿದ್ದಾರೆ.

ಕುಶಾಲನಗರ ಪಟ್ಟಣದ ಬಸಪ್ಪ ಬಡಾವಣೆ ಸಮೀಪ ನಿರ್ಮಾಣಗೊಂಡಿರುವ ಯುಜಿಡಿ ಪೈಪ್‍ಲೈನ್ ಕಾಮಗಾರಿ ಕುಸಿದು ಬಿದ್ದಿದ್ದು, ಸ್ಥಳೀಯ ಸಂಘ-ಸಂಸ್ಥೆಗಳ ಪ್ರಮುಖರ ದೂರಿನ ಅನ್ವಯ ಒಳಚರಂಡಿ ಮಂಡಳಿ ಅಧಿಕಾರಿ ಆನಂದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಮಗಾರಿಯನ್ನು ಪುನರ್ ನಿರ್ಮಾಣ ಮಾಡುವದಾಗಿ ಭರವಸೆ ನೀಡಿದ ಆನಂದ್ ಅವರು, ಕಾಮಗಾರಿ ಗುಣಮಟ್ಟದಲ್ಲಿ ನಡೆಯುವಂತೆ ಎಚ್ಚರವಹಿಸ ಲಾಗುವದೆಂದರು.

ರೂ. 52 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಯೋಜನೆಯಲ್ಲಿ ಪ್ರಧಾನ ಹಂತದ ಕಾಮಗಾರಿ ಜೂನ್ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದ ಆನಂದ್, ಈಗಾಗಲೇ ಕಾಮಗಾರಿಗೆ ರೂ. 40 ಕೋಟಿ ಹಣ ಬಿಡುಗಡೆಯಾಗಿದೆ ಎಂದು ಮಾಹಿತಿ ಒದಗಿಸಿದರು.

ಕಾವೇರಿ ನದಿ ತಟದಲ್ಲಿ ಅವೈಜ್ಞಾನಿಕವಾಗಿ ಒಳಚರಂಡಿ ಯೋಜನೆಯ ಪೈಪ್ ಅಳವಡಿಸುವ ಕಾಮಗಾರಿ ನಡೆಯುತ್ತಿರುವ ಬಗ್ಗೆ ಸ್ಥಳೀಯ ಸಂಘ-ಸಂಸ್ಥೆಗಳ ಪ್ರಮುಖರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯಾವದೇ ರೀತಿಯ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸು ವದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಈ ಸಂದರ್ಭ ಕುಶಾಲನಗರ ಹಿತರಕ್ಷಣಾ ಹೋರಾಟ ಸಮಿತಿಯ ಸಂಚಾಲಕ ಕೆ.ಜಿ. ಮನು, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್, ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಕೃಷ್ಣ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ಪ್ರಮುಖರಾದ ಡಿ.ಆರ್. ಸೋಮಶೇಖರ್, ನಿಡ್ಯಮಲೆ ದಿನೇಶ್, ಮಂಜುನಾಥ್ ಮತ್ತಿತರರು ಇದ್ದರು.