ಭಾಗಮಂಡಲ, ಮೇ 10: ನಿನ್ನೆ ಭಾಗಮಂಡಲದಲ್ಲಿ ತಂದೆ - ಮಗ ಹಾಗೂ ಸೊಸೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಿರುವು ಪಡೆದುಕೊಂಡಿದ್ದು, ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. ಆ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ಪ್ರದೀಪ್ ಹಾಗೂ ಮಂಜುಳ ನಡುವೆ ಆಗಿಂದಾಗ್ಗೆ ಕಲಹ ನಡೆಯುತ್ತಿದ್ದುದಾಗಿ ಯೂ, ತನ್ನ ಮಗ ಪ್ರದೀಪನಿಗೆ ಅನೈತಿಕ ಸಂಬಂಧ ಕುರಿತಂತೆ ಮಂಜುಳ ಆಗಿಂದಾಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದುದಾಗಿ ಮೃತನ ತಾಯಿ ಯಮುನ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ನಿನ್ನೆ ತಾನು ಹಾಗೂ ಮಗಳು ಪವಿತ್ರ ತಾವೂರು ಮನೆಯಲ್ಲಿದ್ದು, ಪೂಜೆಗೆ ಪತಿ ಗೋಪಾಲ, ಮಗ ಪ್ರದೀಪ ಮತ್ತು ಸೊಸೆ ಮಂಜುಳ ಬಂದು ಭಾಗವಹಿಸಿ ಸಂಜೆ ಭಾಗಮಂಡಲ ಮನೆಗೆ ಮಗ, ಸೊಸೆ ಹಿಂತೆರಳಿದ್ದಾಗಿ ಯಮುನ ಪೊಲೀಸರಿಗೆ ತಿಳಿಸಿದ್ದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಖಚಿತಪಡಿಸಿದ್ದಾರೆ.
ಸಂಜೆ ಮನೆಯಲ್ಲಿ ಪ್ರದೀಪ್ ಹಾಗೂ ಮಂಜುಳ ನಡುವೆ ಕಲಹವೇರ್ಪಟ್ಟು, ವಿಕೋಪಕ್ಕೆ ತಿರುಗಿದಾಗ ಅಡುಗೆ ಮನೆಯಲ್ಲಿ ಮಂಜುಳ ನೇಣಿಗೆ ಶರಣಾಗಿದ್ದಾಳೆ. ಅಷ್ಟರಲ್ಲಿ ಪ್ರದೀಪ ಹೆದರಿಕೊಂಡು ಓಡಿಹೋಗಿ ತಾವೂರಿನಲ್ಲಿದ್ದ ಹೆತ್ತವರಿಗೆ ವಿಷಯ ಮುಟ್ಟಿಸಿ, ಅಲ್ಲಿಂದ ತಂದೆ - ಮಗ ಆಗಮಿಸಿದ್ದಾರೆ.
ಆ ವೇಳೆಗೆ ಸೊಸೆ ಸಾವನ್ನಪ್ಪಿದ್ದು, ಕಂಡ ಗೋಪಾಲ ಹಾಗೂ ಪುತ್ರ ಪ್ರದೀಪ ಪೊಲೀಸರು ಬಂಧಿಸುವ ಭಯದಿಂದ ಪ್ರತ್ಯೇಕ ಕೋಣೆಗಳಲ್ಲಿ ನೇಣಿಗೆ ಶರಣಾಗಿರುವದಾಗಿ ಗೊತ್ತಾಗಿದೆ.
ಪೋಷಕರಿಂದ ದೂರು
ಮಗಳು ಮಂಜುಳ ಸಾವನ್ನಪ್ಪಿರುವ ವಿಷಯ ತಿಳಿದು, ಮೂಡಬಿದ್ರೆಯಿಂದ ಆಗಮಿಸಿರುವ ಆಕೆಯ ಪೋಷಕರು, ತಮ್ಮ ಮಗಳು ಅತ್ತೆ ಯಮುನ ಹಾಗೂ ನಾದಿನಿ ಪವಿತ್ರಳ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ.
ಮೃತಳ ಪೋಷಕರಾದ ಪ್ರೇಮ ಅಣ್ಣು ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದಾರೆ. ಈ ನಡುವೆ ಪೊಲೀಸರಿಗೆ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಮಂಜುಳ ಬರೆದಿಟ್ಟಿದ್ದ ಪತ್ರ ಲಭಿಸಿರುವದಾಗಿ ಪೊಲೀಸ್ ಮೂಲಗಳು ತಿಳಿಸಿವೆ.