ಸೋಮವಾರಪೇಟೆ, ಮೇ 11: ಸೋಮವಾರಪೇಟೆ ಬ್ಲಾಕ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ನಿಂತ ನೀರಾಗಿದೆ. ಈ ಹಿಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ.ಎಂ. ಲೋಕೇಶ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿದ ನಂತರ ಈ ಬಗ್ಗೆ ಯಾವದೇ ತೀರ್ಮಾನ ಹೊರಬರದ ಹಿನ್ನೆಲೆ ಕಾರ್ಯಕರ್ತರು ಅನ್ಯಪಕ್ಷಗಳತ್ತ ಮುಖಮಾಡುತ್ತಿದ್ದಾರೆ ಎಂದು ಆ ಪಕ್ಷದ ಮುಂಚೂಣಿ ಘಟಕಗಳ ನಾಯಕರುಗಳೇ ಹೇಳುತ್ತಿದ್ದಾರೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‍ನಿಂದ ಟಿಕೇಟ್ ಪಡೆದು ಸ್ಪರ್ಧಿಸಿದ್ದ ಕೆ.ಎಂ. ಲೋಕೇಶ್ ಅವರು 34 ಸಾವಿರ ಮತಗಳನ್ನು ಪಡೆದು ಈರ್ವರು ಬಲಿಷ್ಠ ನಾಯಕರಿಗೆ ಸೆಡ್ಡುಹೊಡೆದಿದ್ದರು. ಚುನಾವಣೆ ಸೋಲಿನ ನಂತರವೂ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆದಿದ್ದರು.

ಸೋಮವಾರಪೇಟೆ ಬ್ಲಾಕ್ ವ್ಯಾಪ್ತಿಯ ಹೋಬಳಿ, ಬೂತ್ ಮಟ್ಟದಲ್ಲಿಯೂ ಪಕ್ಷ ಸಂಘಟನೆಗೆ ಮುಂದಾಗಿದ್ದ ಕೆ.ಎಂ. ಲೋಕೇಶ್ ಅವರನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸ್ಥಾನದ ಚುನಾವಣೆ ನಂತರ ಪದಚ್ಯುತ ಗೊಳಿಸಲಾಗಿತ್ತು. ಇಲ್ಲಿಯವರೆಗೂ ಸಕ್ರಿಯರಾಗಿದ್ದ ಲೋಕೇಶ್ ಸೇರಿದಂತೆ ಬೆಂಬಲಿಗರು ನಂತರ ಸಂಘಟನೆಯಿಂದ ವಿಮುಖ ರಾಗಿದ್ದು, ಕಳೆದ 3 ತಿಂಗಳ ಅವಧಿಯಲ್ಲಿ ಪಕ್ಷದ ಯಾವದೇ ಕಾರ್ಯಕ್ರಮಗಳು ಈ ಭಾಗದಲ್ಲಿ ನಡೆದಿಲ್ಲ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಅವರ ನಿರ್ದೇಶನವನ್ನೂ ಮೀರಿ ಬಿಜೆಪಿ ಬೆಂಬಲಿತ ಸದಸ್ಯರ ಸಹಕಾರದಿಂದ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತ ಸದಸ್ಯನಿಗೆ ಕೊಡಿಸಿದ್ದಾರೆ ಎಂಬ ಬೆಳವಣಿಗೆಯೇ ಲೋಕೇಶ್ ಪಾಲಿಗೆ ಮುಳುವಾಗಿ ಪರಿಣಮಿಸಿದ್ದು, ಉಸ್ತುವಾರಿ ಸಚಿವರ ಪಟ್ಟು ಸಡಿಲ ಗೊಳ್ಳದ ಹಿನ್ನೆಲೆ ತಲೆದಂಡವಾಗಿತ್ತು.

ಆ ಕ್ಷಣವೇ ಲೋಕೇಶ್ ಸೇರಿದಂತೆ ಇತರ ನಾಯಕರು ಬೆಂಗಳೂರಿಗೆ ತೆರಳಿ ಅಮಾನತು ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯ ಹಾಕಿದ್ದರು. ಉಸ್ತುವಾರಿ ಸಚಿವರ ಆಕ್ರೋಶ ತಣ್ಣಗಾಗದ ಹಿನ್ನೆಲೆ ಒಂದೆರಡು ವಾರಗಳಲ್ಲಿ ಆದೇಶವನ್ನು ಹಿಂಪಡೆಯುತ್ತೇವೆ ಎಂಬ ಭರವಸೆಯನ್ನು ರಾಜ್ಯ ಮುಖಂಡರು ನೀಡಿದ್ದರು.

ಇದಾಗಿ ಮೂರು ತಿಂಗಳು ಕಳೆದರೂ ಅಮಾನತು ಆದೇಶದ ಬಗ್ಗೆ ನಾಯಕರು ತುಟಿಬಿಚ್ಚದೇ ಇರುವದರಿಂದ ಸಹಜವಾಗಿ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡುವಂತೆ ಮಾಡಿದೆ.

ಈಗಾಗಲೇ ಕಾಂಗ್ರೆಸ್‍ನ ಕೆಲ ನಾಯಕರು ಬಿಜೆಪಿ ಹಾಗೂ ಜೆಡಿಎಸ್‍ನತ್ತ ಮುಖ ಮಾಡುತ್ತಿರುವ ಬೆಳವಣಿಗೆಗಳೂ ಕಂಡುಬರುತ್ತಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಚಟುವಟಿಕೆಗಳ ಕೇಂದ್ರವಾಗಿದ್ದ ಇಲ್ಲಿನ ಕಕ್ಕೆಹೊಳೆ ಜಂಕ್ಷನ್‍ನಲ್ಲಿರುವ ಬ್ಲಾಕ್ ಕಾಂಗ್ರೆಸ್ ಕಚೇರಿ ಇದೀಗ ಖಾಲಿ ಖಾಲಿಯಾಗಿದೆ. ಸರ್ಕಾರದ ಕೆಲಸಗಳಿಗೆ, ತಮ್ಮೂರಿನ ಅಭಿವೃದ್ಧಿ ಕಾಮಗಾರಿಗಳಿಗೆ ಹಲವಷ್ಟು ಮಂದಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಆಗಮಿಸಿ ಅರ್ಜಿ ಸಲ್ಲಿಸುತ್ತಿದ್ದ ಸನ್ನಿವೇಶ ಬದಲಾಗಿದ್ದು, ಇದೀಗ ಕಚೇರಿ ಬಿಕೋ ಎನ್ನುತ್ತಿದೆ.

ಉಸ್ತುವಾರಿ ಸಚಿವರು ಸೋಮವಾರಪೇಟೆ ಭಾಗದಲ್ಲಿ ಪ್ರವಾಸ ಹಮ್ಮಿಕೊಳ್ಳುವದೂ ಸಹ ಕಡಿಮೆಯಾಗಿದ್ದು, ಕಾರ್ಯಕರ್ತರು ತಮ್ಮ ಸಮಸ್ಯೆಗಳನ್ನು ಯಾರೊಂದಿಗೆ ಹೇಳಿಕೊಳ್ಳುವದು ಎಂಬ ಸಂದಿಗ್ಧತೆಗೆ ಒಳಗಾಗಿದ್ದಾರೆ. ಇತ್ತ ಬ್ಲಾಕ್ ಕಾಂಗ್ರೆಸ್ ಕಚೇರಿಯೂ ವಾರದ ಬಹುತೇಕ ದಿನ ಬಾಗಿಲು ಮುಚ್ಚಿದ್ದು, ಪಕ್ಷ ಸಂಬಂಧಿತ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದೆ.

ನಾಯಕರುಗಳ ಪ್ರತಿಷ್ಠೆ ಬದಿಗಿಟ್ಟು ಪಕ್ಷ ಸಂಘಟನೆಗೆ ಸಮರ್ಥರನ್ನು ನೇಮಿಸಬೇಕಿದೆ. ಚುನಾವಣೆ ಸಮೀಪಿಸುತ್ತಿದ್ದರೂ ಅಧ್ಯಕ್ಷ ಸ್ಥಾನದ ಗೊಂದಲ ಸರಿಪಡಿಸದೇ ಇರುವದರಿಂದ ಪಕ್ಷದ ಹಲವು ಕಾರ್ಯಕರ್ತರು ಅನ್ಯ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್‍ಗೆ ಹಿನ್ನಡೆಯಾಗಲಿದೆ. ನಾಯಕರುಗಳು ಈ ಬಗ್ಗೆ ತಕ್ಷಣ ತೀರ್ಮಾನ ಕೈಗೊಳ್ಳಬೇಕೆಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪದಚ್ಯುತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ‘ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಯಾಗಿರುವ ಹಿನ್ನೆಲೆ ಮಡಿಕೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳುವಂತೆ ವರಿಷ್ಠರು ನಿರ್ದೇಶನ ನೀಡಿದ್ದಾರೆ.

ಕಳೆದ ಕೆಲ ಸಮಯಗಳಿಂದ ಪಕ್ಷದ ಸಂಘಟನೆ, ಕಾರ್ಯಕ್ರಮಗಳು ನಿಂತ ನೀರಾಗಿದ್ದುದು ನಿಜ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಿಷ್ಠವಾಗಿ ಪಕ್ಷವನ್ನು ಸಂಘಟಿಸ ಲಾಗುವದು. ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವದೇ ನಮ್ಮ ಗುರಿ ಎಂದು ವಿಶ್ವಾಸದ ನುಡಿಯಾಡಿದ್ದಾರೆ.

‘ಕಾಂಗ್ರೆಸ್‍ನಿಂದ ಯಾವದೇ ಕಾರ್ಯಕರ್ತರು ಅನ್ಯಪಕ್ಷಗಳತ್ತ ಮುಖಮಾಡುವದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದ್ದು, ಮುಂದಿನ ಚುನಾವಣೆಯಲ್ಲೂ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

- ವಿಜಯ್ ಹಾನಗಲ್