ಗೋಣಿಕೊಪ್ಪಲು, ಮೇ 11: ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗ ದಲ್ಲಿ ವಿಜಯಲಕ್ಷ್ಮಿ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಅಳಮೇಂಗಡ ಕ್ರಿಕೆಟ್ ಕಪ್‍ನಲ್ಲಿ ಇಂದು ಮಿನ್ನಂಡ, ಮೂಕಳೇರ, ಮೂಕೊಂಡ, ದೇಯಂಡ, ಅಣ್ಣಳಮಾಡ, ಚಿಮ್ಮಣಮಾಡ ಹಾಗೂ ಮಂಡುವಂಡ ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದಿವೆ.
ಮೂಕಳೇರ ಹಾಗೂ ಗೀಜಿಗಂಡ ತಂಡಗಳ ನಡುವಿನ ಪಂದ್ಯ ಸೂಪರ್ ಓವರ್ ಫಲಿತಾಂಶ ನೀಡಿತು. ಮೂಕಳೇರ ಸೂಪರ್ ಓವರ್‍ನಲ್ಲಿ ಗೆಲುವು ಪಡೆಯಿತು. ಸೂಪರ್ ಓವರ್‍ನಲ್ಲಿ ಮೂಕಳೇರ 2 ವಿಕೆಟ್‍ಗೆ 7 ರನ್, ಗೀಜಿಗಂಡ 1 ವಿಕೆಟ್‍ಗೆ 5 ರನ್ ಗಳಿಸಿತು. ಪಂದ್ಯದಲ್ಲಿ ಮೂಕಳೇರ 5 ವಿಕೆಟ್‍ಗೆ 51, ಗೀಜಿಗಂಡ 9 ವಿಕೆಟ್‍ಗೆ 51 ರನ್ ಗಳಿಸಿತು.
ಕರ್ತಮಾಡ ತಂಡವು 7 ಆಟಗಾರರೊಂದಿಗೆ ಆಟವಾಡಿ 7 ರನ್ ದಾಖಲಿಸುವ ಮೂಲಕ ಸಣ್ಣ ಮೊತ್ತ ಕಲೆ ಹಾಕಿತು. ಮಿನ್ನಂಡ ವಿರುದ್ಧ ಕರ್ತಮಾಡ ತಂಡವು 10 ವಿಕೆಟ್‍ಗಳಿಂದ ಸೋಲನುಭವಿಸಿತು. ಕರ್ತಮಾಡ 6 ವಿಕೆಟ್‍ಗೆ 7 ರನ್ ಗಳಿಸಿತು. ಆಟಗಾರರ ಕೊರತೆಯ ನಡುವೆ ಆಟವಾಡಿ ಗಮನ ಸೆಳೆದರು. ಮಿನ್ನಂಡ ಪರ ಮಂದಣ್ಣ 2, ಸುಜನ್, ಪೊನ್ನಣ್ಣ ಹಾಗೂ ಸುಬ್ಬಯ್ಯ ತಲಾ ಒಂದೊಂದು ವಿಕೆಟ್ ಪಡೆದರು. ಮಿನ್ನಂಡ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟಿತು. ಕರ್ತಮಾಡ ಸಂಪತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಮೂಕೊಂಡ ತಂಡವು ಹಂಚೇಟಿರ ತಂಡವನ್ನು 10 ವಿಕೆಟ್‍ಗಳಿಂದ ಸೋಲಿಸಿತು. ಮೂಕೊಂಡ 5 ವಿಕೆಟ್‍ಗೆ 56 ರನ್, ಹಂಚೇಟೀರ 9 ವಿಕೆಟ್‍ಗೆ 46 ರನ್ ಗಳಿಸಿತು. ಹಂಚೇಟಿರ ನವೀನ್ 20 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ದೇಯಂಡ ತಂಡಕ್ಕೆ ಕುಟ್ಟಂಡ (ಕಾರ್ಮಾಡ್) ವಿರುದ್ಧ 6 ವಿಕೆಟ್ ಜಯ ಲಭಿಸಿತು. ಕುಟ್ಟಂಡ 4 ವಿಕೆಟ್‍ಗೆ 53 ರನ್, ದೇಯಂಡ 4 ವಿಕೆಟ್ ನಷ್ಟಕ್ಕೆ 57 ರನ್ ಬಾರಿಸಿತು. ಕುಟ್ಟಂಡ ಸೋಮಣ್ಣ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಅಣ್ಣಳಮಾಡ (ಬಿರುನಾಣಿ) ತಂಡವು ಕಲ್ಯಾಟಂಡ ವಿರುದ್ಧ 37 ರನ್‍ಗಳ ಗೆಲುವು ಪಡೆಯಿತು. ಅಣ್ಣಳಮಾಡ ಮೊದಲು ಬ್ಯಾಟ್ ಮಾಡಿ 6 ವಿಕೆಟ್ ನಷ್ಟಕ್ಕೆ 81 ರನ್ ಬಾರಿಸಿತು. ಕಲ್ಯಾಟಂಡ 5 ವಿಕೆಟ್‍ಗೆ 44 ರನ್ ಗಳಿಸಿ ಸೋಲನುಭವಿಸಿತು. ಕಲ್ಯಾಟಂಡ ಗಿರೀಶ್ 20 ರನ್ ಹೊಡೆದು ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಚಿಮ್ಮಣಮಾಡ ತಂಡವು ನಂದೇಟೀರ ವಿರುದ್ಧ 7 ರನ್‍ಗಳಿಂದ ಗೆಲುವು ಪಡೆಯಿತು. ಚಿಮ್ಮಣಮಾಡ 8 ವಿಕೆಟ್‍ಗೆ 50 ರನ್‍ಗಳ ಗುರಿ ನೀಡಿತು. ನಂದೆಟೀರ 8 ವಿಕೆಟ್‍ಗೆ 42 ರನ್ ಬಾರಿಸಿತು. ನಂದೇಟೀರ ನಿಶಿ 23 ರನ್ ಹೊಡೆದು ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಮಂಡುವಂಡ ತಂಡವು ನೆರವಂಡ ವಿರುದ್ಧ 9 ವಿಕೆಟ್ ಗೆಲುವು ಪಡೆಯಿತು. ನೆರವಂಡ 6 ವಿಕೆಟ್‍ಗೆ 36 ರನ್, ಮಂಡುವಂಡ 1 ವಿಕೆಟ್‍ಗೆ 37 ರನ್ ಬಾರಿಸಿತು. ನೆರವಂಡ ಶರತ್ 15 ರನ್ ಹೊಡೆದು ಪಂದ್ಯ ಪುರುಷ ಪ್ರಶಸ್ತಿ ಪಡೆದರು.