ಸೋಮವಾರಪೇಟೆ, ಮೇ 10: ಭೂಮಿಯನ್ನು ನಂಬಿದವರು ಎಂದಿಗೂ ಸೋಲುವದಿಲ್ಲ ಎಂಬ ಮಾತಿದೆ. ಭೂತಾಯಿಯ ಮಡಿಲಲ್ಲಿ ಶ್ರದ್ಧೆಯಿಂದ ಕೃಷಿ ಮಾಡಿದರೆ ಭೂದೇವಿ ಅವರ ಕೈಬಿಡುವದಿಲ್ಲ ಎಂಬ ಮಾತಿಗೆ ಹಾನಗಲ್ಲು ಶೆಟ್ಟಳ್ಳಿಯ ಕೃಷಿಕ ಉಲ್ಲಾಸ್ ಸ್ಪಷ್ಟ ಉದಾಹರಣೆ.
ಹಲವಾರು ದಶಕಗಳಿಂದ ಪಾಳು ಬಿದ್ದಿದ್ದ ಬರಡು ನೆಲದಲ್ಲಿ ಶ್ರದ್ಧೆಯಿಂದ ಕೃಷಿ ಮಾಡಿದ ಇವರಿಗೆ ಇದೀಗ ಕೈತುಂಬಾ ಹಣ. ಭೂಮಿಗೆ ಹಾಕಿದ ಹಣ ನಮ್ಮನ್ನು ಎಂದೆಂದಿಗೂ ಕಾಪಾಡುತ್ತದೆ ಎಂಬದಕ್ಕೆ ನಾನೇ ಉದಾಹರಣೆ, ಪ್ರೀತಿಯಿಂದ ಕೃಷಿಯಲ್ಲಿ ತೊಡಗಿದರೆ ಅದೂ ನಮಗೆ ಪ್ರೀತಿಪಾತ್ರವಾಗುತ್ತದೆ ಎಂಬದು ಉಲ್ಲಾಸ್ ಅವರ ಅಭಿಪ್ರಾಯ.
ತಾಲೂಕಿನ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಕೃಷಿಕ ಕುಟುಂಬವಾಗಿರುವ ಉಲ್ಲಾಸ್ ಅವರು ಬರಡು ಭೂಮಿಯಲ್ಲಿ ಬೀನ್ಸ್ ಬೆಳೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಲ್ಲಿ ಪ್ರಾರಂಭಿಸಿದ ಬೀನ್ಸ್ ಹಾಗೂ ಮೆಣಸು ಕೃಷಿ ಇದೀಗ ಇವರಿಗೆ ಕೈತುಂಬಾ ಆದಾಯವನ್ನು ತಂದುಕೊಡುತ್ತಿದೆ.
ಬರಪರಿಸ್ಥಿತಿ ಜಿಲ್ಲೆಯನ್ನು ಕಾಡುತ್ತಿದ್ದರೂ ಸಹ ಇವರು ಬರದ ಬೇಗೆಗೆ ಒಳಗಾಗದೇ ಪಕ್ಕದ ತೋಟದವರ ಬೋರ್‍ವೆಲ್ ಬಳಸಿಕೊಂಡು ಕೃಷಿಗೆ ಬೇಕಾದ ಅಗತ್ಯ ನೀರನ್ನು ಹರಿಸಿ ಬರಡು ನೆಲವನ್ನು ಹಸಿರಾಗಿಸಿದ್ದಾರೆ.
ತಮಗೆ ಸೇರಿದ 4 ಎಕರೆ ಕಾಫಿ ತೋಟ ಹಾಗೂ 3 ಎಕರೆ ಗದ್ದೆಯಿಂದ ಜೀವನ ನಿರ್ವಹಣೆ ಕಷ್ಟಸಾಧ್ಯವಾದ ಹಿನ್ನೆಲೆ ಅದೇ ಗ್ರಾಮದ ಎಂ.ಪಿ. ಜ್ಯೋತಿ ಪ್ರಕಾಶ್ ಅವರಿಗೆ ಸೇರಿದ ಸುಮಾರು 2 ಎಕರೆ ಜಾಗ ಬರಡಾಗಿ ಬಿದ್ದಿದ್ದನ್ನು ಕಂಡು, ಈ ನೆಲದಲ್ಲಿ ಆದಾಯ ತೆಗೆಯಲು ಮನಸ್ಸು ಮಾಡಿದ್ದರ ಫಲವಾಗಿ ಇದೀಗ ಯಶಸ್ವಿ ಕೃಷಿಕರಾಗಿ ಹೊರಹೊಮ್ಮಿದ್ದಾರೆ.
ಎರಡು ಎಕರೆ ಜಾಗವನ್ನು ಟ್ರ್ಯಾಕ್ಟರ್‍ನಿಂದ ಉತ್ತು, ಸಮೀಪದ ಕಾರ್ಯಪ್ಪ ಅವರಿಗೆ ಸೇರಿದ ಬೋರ್‍ವೆಲ್‍ನಿಂದ ನೀರು ಹರಿಸಿ ನೆಲವನ್ನು ಹದಗೊಳಿಸಿದ ನಂತರ ಪಾತಿ ಮಾಡಿ ಸುಮಾರು ಎರಡೂವರೆ ಸಾವಿರ ಎನ್.ಝೆಡ್. ಸೂಪರ್‍ಕಿಂಗ್ ತಳಿಯ ಬಳ್ಳಿ ಬೀನ್ಸ್, ಅನೂಪ್ ತಳಿಯ 16 ಸಾವಿರ ಗಿಡಬೀನ್ಸ್, ಇದರ ನಡುವೆ ಯಾಸ್ಮಿನ್ ತಳಿಯ 17 ಸಾವಿರ ಮೆಣಸಿನ ಗಿಡವನ್ನು ಕಳೆದ ಫೆಬ್ರವರಿ 20ರಿಂದ ಮಾರ್ಚ್ 2ರ ಒಳಗೆ ನೆಟ್ಟಿದ್ದಾರೆ.
ಪ್ರತಿದಿನ ನೀರು ಹಾಯಿಸುವದರೊಂದಿಗೆ ಗಿಡಗಳನ್ನು ಉತ್ತಮವಾಗಿ ಆರೈಕೆ ಮಾಡಿದ್ದರಿಂದ ಏಪ್ರಿಲ್ ಕೊನೆಯ ವಾರದಲ್ಲೇ ಒಂದು ಟನ್ ಬೀನ್ಸ್ ಕೊಯ್ಲು ಮಾಡಿ 35 ಸಾವಿರ ಆದಾಯ ಸಂಪಾದಿಸಿದ್ದಾರೆ. ಕೇವಲ ಎರಡು ತಿಂಗಳಿನಲ್ಲಿಯೇ ಬೀನ್ಸ್ ಬಳ್ಳಿ ಹುಲುಸಾಗಿ ಬೆಳೆದು ಇದೀಗ ಬಳ್ಳಿ ತುಂಬಾ ಬೀನ್ಸ್ ರಾರಾಜಿಸುತ್ತಿದೆ. ಪ್ರಸ್ತುತ ಒಂದು ಬಳ್ಳಿಯಲ್ಲಿ ಒಮ್ಮೆಗೆ ಕನಿಷ್ಟ 5 ಕೆ.ಜಿ. ಬೀನ್ಸ್ ಲಭಿಸುತ್ತಿದೆ.
ಈಗಾಗಲೇ ಒಂದು ಬಾರಿ ಬೀನ್ಸ್ ಕೊಯ್ಲು ಮಾಡಲಾಗಿದ್ದು, ಇನ್ನೂ ಆರರಿಂದ ಏಳು ಬಾರಿ ಕುಯ್ಲು ಮಾಡಬೇಕಿದೆ. ಗಿಡಗಳಲ್ಲಿ ಉತ್ತಮ ಫಸಲು ಇರುವದರಿಂದ ಪ್ರತಿ ಬಾರಿಯ ಕುಯ್ಲಿನಲ್ಲಿ ಒಂದು ಟನ್ ಬೀನ್ಸ್ ಸಿಕ್ಕೇ ಸಿಗುತ್ತದೆ ಎಂದು ಕೃಷಿಕ ಉಲ್ಲಾಸ್ ಭರವಸೆ ವ್ಯಕ್ತಪಡಿಸುತ್ತಾರೆ.
ನೀರಿನ ಸೌಲಭ್ಯವೊಂದಿದ್ದರೆ ಬೀನ್ಸ್ ಕೃಷಿ ಕಷ್ಟವೆನಿಸುವದೇ ಇಲ್ಲ. ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದ್ದು, ನಮಗೆ ಕೆ.ಜಿ. ಒಂದಕ್ಕೆ 40 ರಿಂದ 50 ರೂಪಾಯಿ ಲಭಿಸುತ್ತಿದೆ. ಹಾಕಿದ ಬಂಡವಾಳಕ್ಕೆ ಮೋಸವಿಲ್ಲ. ಈ ಬೆಳೆಗೆ ಅಷ್ಟೊಂದು ಖರ್ಚು ತಗಲುವದಿಲ್ಲ. ಬೀನ್ಸ್ ಬೆಳೆದ ನಂತರ ಕೀಟಗಳಿಗೆ ಆಮ್ಲ ಸಿಂಪಡಿಸಿದರಷ್ಟೇ ಸಾಕು. ಮೆಣಸಿಗೆ ಆವರಿಸುವ ಮಿಡತೆ ಹಾಗೂ ಮುಜುಗು ರೋಗಕ್ಕೆ ಔಷಧಿ ಹಾಕಿ ಕಾಪಾಡಿಕೊಂಡಿದ್ದೇನೆ ಎಂದು ಬಂಪರ್ ಬೆಳೆಯ ಹಿನ್ನೆಲೆಯನ್ನು ಉಲ್ಲಾಸ್ ಬಿಚ್ಚಿಟ್ಟಿದ್ದಾರೆ.
ಬರಡಾಗಿದ್ದ ಎರಡು ಎಕರೆಯಲ್ಲಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಬೀನ್ಸ್ ಕೃಷಿಗಾಗಿ ಇದುವರೆಗೂ ಕೇವಲ 4 ಟ್ರ್ಯಾಕ್ಟರ್ ಸಗಣಿ ಗೊಬ್ಬರ ಮಾತ್ರ ಹಾಕಿದ್ದಾರೆ. ದಿನಂಪ್ರತಿ ಹದವಾದ ನೀರು ಸಿಂಪರಣೆಗಾಗಿ ಮೈಕ್ರೋ ಇರಿಗೇಷನ್ ವ್ಯವಸ್ಥೆ ಕಲ್ಪಿಸಿದ್ದಾರೆ. ಉಲ್ಲಾಸ್ ಅವರೊಂದಿಗೆ ರೈಯು ಹಾಗೂ ಗಣೇಶ್ ಅವರುಗಳು ಹೆಚ್ಚಿನ ಕಾಳಜಿಯೊಂದಿಗೆ ಬೀನ್ಸ್ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇದರೊಂದಿಗೆ ಹೈನುಗಾರಿಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಉಲ್ಲಾಸ್ ಅವರು ತಮ್ಮಲ್ಲಿರುವ 6 ಹಸುಗಳಿಂದ ಪ್ರತಿದಿನ 40ರಿಂದ 50 ಲೀಟರ್ ಹಾಲು ಕರೆಯುತ್ತಾರೆ. ಸುತ್ತಮುತ್ತಲಿನವರಿಗೆ ಹಾಲು ನೀಡಿದ ನಂತರ ಉಳಿದ ಹಾಲನ್ನು ಡೈರಿಗೆ ನೀಡುತ್ತಾರೆ. ಪತ್ನಿ ವೀಣಾ, ತಂದೆ ಎಲ್.ಆರ್. ಬಸಪ್ಪ ಮತ್ತು ಉಲ್ಲಾಸ್ ಅವರ ತಾಯಿಯೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಕಾಫಿ ತೋಟ ನಿರ್ವಹಣೆಯೊಂದಿಗೆ ಗದ್ದೆಯಲ್ಲಿ ಭತ್ತ ಕೃಷಿಯನ್ನು ಕೈಗೊಂಡು ಕೃಷಿಕ ಕುಟುಂಬ ಎಂಬದನ್ನು ನಿರೂಪಿಸಿದ್ದಾರೆ.
ಬರಡು ಭೂಮಿಯಲ್ಲಿ ಕೃಷಿ ಪ್ರಾರಂಭಿಸಿದ ಸಂದರ್ಭ ಹಲವರು ಮೂದಲಿಸಿದ್ದರು. ಕೈಸುಟ್ಟುಕೊಳ್ಳುವದು ಖಚಿತ ಎಂದು ಎಚ್ಚರಿಸಿದ್ದರು. ಇದೀಗ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ ಎಂದು ಉಲ್ಲಾಸ್ ಸದ್ಯದ ಪರಿಸ್ಥಿತಿ ವಿವರಿಸಿದರು. ಕೃಷಿಯಲ್ಲಿ ಆಸಕ್ತಿ ಇರುವವರು ಉಲ್ಲಾಸ್ ಅವರನ್ನು(ಮೊ: 9482274522) ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದು ಯಶಸ್ವಿ ಕೃಷಿಕರಾಗಿ. ಕೃಷಿಕರೇ ದೇಶದ ಬೆನ್ನೆಲುಬಾಗಿದ್ದು, ರೈತರು ಬೆಳೆದ ಬೆಳೆಗಳನ್ನು ಖರೀದಿಸಿ ಕೃಷಿಕರನ್ನು ಉತ್ತೇಜಿಸುವ ಕಾರ್ಯ ಎಲ್ಲರಿಂದಲೂ ಆಗಲಿ!
- ವಿಜಯ್ ಹಾನಗಲ್