ಕುಶಾಲನಗರ, ಮೇ 10: ಕುಶಾಲನಗರ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಕಳಪೆ ಗುಣಮಟ್ಟ ದೊಂದಿಗೆ ಅವೈಜ್ಞಾನಿಕವಾಗಿ ನಿರ್ಮಾಣವಾಗುತ್ತಿದೆ ಎಂದು ಕುಶಾಲನಗರ ಹಿತರಕ್ಷಣಾ ಹೋರಾಟ ಸಮಿತಿ ಸಂಚಾಲಕ ಕೆ.ಜಿ. ಮನು ಆರೋಪಿಸಿದ್ದಾರೆ.
ಕಳೆದ 2 ವರ್ಷಗಳಿಂದ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಯನ್ನು ಕರ್ನಾಟಕ ಒಳಚರಂಡಿ ಮಂಡಳಿ ಮೂಲಕ ನಿರ್ವಹಿಸ ಲಾಗುತ್ತಿದ್ದು ಹಲವೆಡೆ ಕಾಮಗಾರಿ ಸಂಪೂರ್ಣ ಕಳಪೆಗೊಂಡಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಕಾಮಗಾರಿ ಕುಸಿದು ಬಿದ್ದಿದ್ದು ಈ ಬಗ್ಗೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದಾರೆ ಎಂದಿದ್ದಾರೆ. ಅಂದಾಜು ರೂ. 53 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಯಬೇಕಾಗಿದೆ ಎಂದಿರುವ ಕೆ.ಜಿ. ಮನು, ಕುಶಾಲನಗರದ ಬಸಪ್ಪ ಮತ್ತು ಸಾಯಿ ಲೇಔಟ್ ನಡುವೆ ರಾಜಕಾಲುವೆ ಬಳಿ ನಿರ್ಮಿಸಿದ ಕಾಮಗಾರಿ ಕುಸಿದು ಬಿದ್ದಿರುವ ದೃಶ್ಯ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಒಳಚರಂಡಿ ಕಾಮಗಾರಿ ಸಂಪರ್ಕ ಕೊಳವೆ ಅಳವಡಿಸುವ ಕೆಲಸ ಕಾವೇರಿ ನದಿ ತಟದಲ್ಲಿ ಕೈಗೊಂಡಿದ್ದು ಅವೈಜ್ಞಾನಿಕ ಕಾಮಗಾರಿಯಾಗಿದೆ ಎಂದು ಆರೋಪಿಸಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್, ನದಿಯಲ್ಲಿ ಪ್ರವಾಹ ಸಂದರ್ಭ ಒಳಚರಂಡಿಗೆ ಅಳವಡಿಸಿರುವ ಪೈಪ್‍ಗಳು ನೀರಿನಲ್ಲಿ ಮುಳುಗಡೆ ಯಾಗುವದರೊಂದಿಗೆ ಕಾಮಗಾರಿ ನಡೆಸಲು ಅನಾನುಕೂಲ ಉಂಟಾಗುವ ಸಂಭವವಿದೆ.
ನದಿ ತಟದಿಂದ ನಿಯಮಾನುಸಾರ ಅಂತರ ಕಾಯ್ದು ಕಾಮಗಾರಿ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.