ಮಡಿಕೇರಿ, ಮೇ 11: ರಾಜ್ಯದಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ. ಆದ್ದರಿಂದ ನಾಮಫಲಕಗಳಲ್ಲಿ ಕನ್ನಡ ಭಾಷೆ ಪ್ರಥಮವಾಗಿ ಬರೆದಿರಬೇಕು. ನಾಮಫಲಕಗಳಲ್ಲಿ ಕನ್ನಡ ಭಾಷೆ ಕಣ್ಣಿಗೆ ಕಾಣಬೇಕು ಮತ್ತು ಕಿವಿಗೆ ಕೇಳುವಂತಿರ ಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕನ್ನಡ ಅನುಷ್ಠಾನ ಸಂಬಂಧ ಅಧಿಕಾರಿಗಳೊಂದಿಗೆ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಇಂದು ಮಾತನಾಡಿದರು.

ಸ್ಥಳೀಯ ಸಂಸ್ಥೆಗಳು ಪರವಾನಗಿ ನೀಡುವ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಬಳಸಬೇಕು ಎಂಬ ಷರತ್ತನ್ನು ವಿಧಿಸಿ, ಪರವಾನಗಿ ನೀಡಬೇಕು ಎಂದು ಅವರು ತಿಳಿಸಿದರು.

ಗಡಿ ಪ್ರದೇಶಗಳಲ್ಲಿ ಕನ್ನಡ ಭಾಷಾ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಬೇಕು. ವಿವಿಧ ಇಲಾಖೆಗಳಿಂದ ನೀಡಲಾಗುವ ಜಾಹೀರಾತುಗಳನ್ನು ಕನ್ನಡದಲ್ಲಿಯೇ ನೀಡಬೇಕು ಎಂದು ಅವರು ಸೂಚನೆ ನೀಡಿದರು.

ಕನ್ನಡ ಅನುಷ್ಠಾನ ಸಂಬಂಧ ಪ್ರತೀ ತಿಂಗಳು ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಕಳುಹಿಸಿಕೊಡಲಾಗುವ ಮಾಹಿತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳುಹಿಸಿಕೊಡಬೇಕು. ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ 2010ರಿಂದ ಇದುವರೆಗೆ ಎಷ್ಟು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಶಾಲೆಗಳನ್ನು ಮುಚ್ಚಲು ಕಾರಣವೇನು, ಕನ್ನಡ ಭಾಷೆ ಶಿಕ್ಷಕರ ಬೋಧನೆಯಲ್ಲಿ ಮತ್ತಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ್ತ್ತಿತರ ಮಾಹಿತಿಯನ್ನು ಕಳುಹಿಸಿಕೊಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಹೇಳಿದರು.

ಜಿಲ್ಲೆಯಲ್ಲಿ 72 ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು 42 ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 20 ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಆದರೆ ಯಾವುದೇ ಶಾಲೆಯಲ್ಲಿ ಶಿಕ್ಷಕರ ಕೊರತೆ ಇಲ್ಲ ಎಂದು ಪ್ರಬಾರ ಅಧಿಕಾರಿ ಮಲ್ಲೇಸ್ವಾಮಿ ತಿಳಿಸಿದರು.

ಬಳಿಕ ಮಾತನಾಡಿದ ಎಸ್.ಜಿ. ಸಿದ್ದರಾಮಯ್ಯ ಸಾರ್ವಜನಿಕ ಶಿಕ್ಷ್ಪ್ಷಣ ಇಲಾಖೆ ಅಧಿಕಾರಿಗಳು ವಸ್ತುನಿಷ್ಠ ಮಾಹಿತಿ ನೀಡಿದ್ದು, ಶಿಕ್ಷಣ ಇಲಾಖೆಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇರುವ ಸೌಲಭ್ಯಗಳನ್ನು ಬಳಸಿಕೊಂಡು ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರಿ ಶಾಲೆಗಳಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಕೆಳಸ್ತರದಲ್ಲಿರುವ ಮಕ್ಕಳು ಬರುತ್ತಾರೆ. ಅಂತಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನಹರಿಸಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್ ಅವರು ಮಾತನಾಡಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ಕಡ್ಡಾಯವಾಗಿ ಹಾಡಿಸಬೇಕು. ಬ್ಯಾಂಕ್‍ಗಳ ಚಲನ್‍ಗಳು ಕನ್ನಡದಲ್ಲಿರ ಬೇಕು. ಗಡಿ ಉತ್ಸವ ಕಾರ್ಯಕ್ರಮ ಆಯೋಜಿಸಬೇಕು. ನ್ಯಾಯಾಲಯ ಗಳಲ್ಲಿ ಕನ್ನಡ ಭಾಷೆಯಲ್ಲಿ ತೀರ್ಪು ನೀಡಬೇಕು ಎಂದು ಅವರು ಸಲಹೆ ಮಾಡಿದರು.

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಮಾತನಾಡಿ ನಾಡು, ನುಡಿ, ಆಡು ಭಾಷೆಯಾದ ಕನ್ನಡಕ್ಕೆ ಪ್ರಥಮ ಆದ್ಯತೆ. ನಾವುಗಳೆಲ್ಲರೂ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿಕೊಂಡು ಬಂದಿದ್ದೇವೆ. ಕನ್ನಡ ಭಾಷೆಯನ್ನು ನೂರರಷ್ಟು ಬಳಸಬೇಕು. ನಾಮಫಲಕ ಗಳಲ್ಲಿ ಕನ್ನಡ ಕಡ್ಡಾಯವಾಗಿ ಬಳಸುವ ಸಂಬಂಧ ಸೂಕ್ತ ನಿರ್ದೇಶನ ನೀಡಲಾಗುವದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಮಾತನಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ ಅವರು ಆಡಳಿತ, ಶಿಕ್ಷಣ, ಉದ್ಯೋಗದಲ್ಲಿ ಕನ್ನಡ ಅನುಷ್ಠಾನ ಕಡ್ಡಾಯವಾಗಿ ಆಗಬೇಕು ಎಂದು ಹೇಳಿದರು. ನಾನಾ ಇಲಾಖೆ ಅಧಿಕಾರಿಗಳು ಇದ್ದರು.

ಭಾಷೆ ಇನ್ನಷ್ಟು ಬೆಳವಣಿಗೆ

ಕನ್ನಡ ಸಹೋದರ ಭಾಷೆಗಳು ಕನ್ನಡದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಕನ್ನಡದಲ್ಲಿ ಬರೆಯುವವರ ಸಂಖ್ಯೆ ಹೆಚ್ಚಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಎಸ್.ಜಿ. ಸಿದ್ದರಾಮಯ್ಯ ಹೇಳಿದರು.

ನಗರದ ಸುದರ್ಶನ ಅಥಿತಿ ಗೃಹದಲ್ಲಿ ಸಾಹಿತಿಗಳು ಕನ್ನಡ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆಗೆ ಮುನ್ನ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಸುವ ಸಂಬಂಧ ದೊಡ್ಡ ಚಳುವಳಿಯೇ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಹಾಗೂ ಶಿಕ್ಷ್ಷಣ ತಜ್ಞ ಎನ್. ಮಹಾಬಲೇಶ್ವರ ಭಟ್ ಮಾತನಾಡಿ ಕನ್ನಡ ಶಾಲೆಗಳ ಇಂದಿನ ಸ್ಥಿತಿಗತಿ, ಸಾಮಾಜಿಕ ಬೆಳವಣಿಗೆ, ಭಾಷಾ ಬೆಳವಣಿಗೆ ಬಗ್ಗೆ ಹಲವು ಸಲಹೆ ನೀಡಿದರು.

ಸಾಹಿತಿ ಷಂಶುದ್ದೀನ್ ಮಾತನಾಡಿ ಕನ್ನಡ ಸಹೋದರ ಭಾಷೆಗಳು ಬೆರೆಯುವ ಕೆಲಸವಾಗಬೇಕು ಎಂದು ಹೇಳಿದರು.

ಮಧೂಶ್ ಪೂವಯ್ಯ ಮಾತನಾಡಿ ಅಕಾಡೆಮಿಗಳು ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುತ್ತಿವೆಯೇ ಹೊರತು, ಸಾಹಿತ್ಯದತ್ತ ಗಮನಹರಿಸುತ್ತಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಸಾಹಿತಿ ಡಾ. ಜೆ. ಸೋಮಣ್ಣ ಮಾತನಾಡಿ ಶಿಕ್ಷಕರಲ್ಲಿ ಸಾಹಿತ್ಯದ ಆಸಕ್ತಿ ಇನ್ನಷ್ಟು ಬೆಳೆಸುವಂತಾಗಬೇಕು. ಗ್ರಂಥಾಲಯಗಳು ಪ್ರತಿಯೊಬ್ಬರನ್ನು ಆಕರ್ಷಿಸುವಂತಿರಬೇಕು ಎಂದು ಸಲಹೆ ಮಾಡಿದರು.

ಮುಲ್ಲೆಂಗಡ ರೇವತಿ ಪೂವಯ್ಯ ಅವರು ಮಾತನಾಡಿ ಜೆಆರ್‍ಎಫ್ ಪರೀಕ್ಷೆ ಬರೆಯಲು ಕನ್ನಡ ಭಾಷೆಯಲ್ಲು ಅವಕಾಶವಾಗಬೇಕು ಎಂದು ಸಲಹೆ ನೀಡಿದರು.

ಕನ್ನಡ ಸಂಘಟನೆಯ ಜಗದೀಶ್ ಮಾತನಾಡಿ ಕೆಳಹಂತದ ನ್ಯಾಯಾಲಯಗಳಲ್ಲಿ ಕನ್ನಡ ಭಾಷೆಯಲ್ಲಿ ತೀರ್ಪು ನೀಡಬೇಕು ಎಂದು ಸಲಹೆ ಮಾಡಿದರು.