ಕೂಡಿಗೆ, ಮೇ 10: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದ ಸಮೀಪದಲ್ಲಿರುವ ಬ್ಯಾಡಗೊಟ್ಟದಲ್ಲಿರುವ 150 ಎಕರೆ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳ ಹಿಂದೆಯೇ ಕೂಡಿಗೆ ಗ್ರಾಮ ಪಂಚಾಯಿತಿಗೆ ಖಾತೆ ವರ್ಗಾವಣೆಯಾಗಿ ಸರ್ವೆ ನಂ 10, 11, 12 ರಲ್ಲಿ 25 ಎಕರೆಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ಕಾಯ್ದಿರಿಸಲಾಗಿದೆ.
ಈ ಜಾಗವನ್ನು ಆಯ್ದ ಫಲಾನುಭವಿಗಳಿಗೆ ಹಾಗೂ ಪರಿಶಿಷ್ಟ ಪಂಗಡವರಿಗೆ ನೀಡಲು ತೀರ್ಮಾನ ಕೈಗೊಂಡು ತಾಲೂಕು ಮಟ್ಟದ ಕಚೇರಿಗಳಿಗೆ ಕಳುಹಿಸಲಾಗಿದೆ. ಆದರೆ ಇದುವರೆಗೂ ತಾಲೂಕು ಕಂದಾಯ ಇಲಾಖೆಯವರು ಸರ್ವೆ ನಡೆಸಿ ಜಾಗವನ್ನು ಗುರುತಿಸಿರುವ ಕಡತವನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸದೇ ಇದ್ದುದರಿಂದ ಈ ಕೇಂದ್ರಕ್ಕೆ ರಾಜ್ಯ ಕಂದಾಯ ಸಚಿವರು ಭೇಟಿ ನೀಡಿದಾಗ ಗ್ರಾಮ ಪಂಚಾಯಿಯ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸದಸ್ಯರು ದೂರು ನೀಡಿದ್ದರು. ಈ ಹಿನ್ನೆಲೆ ತುರ್ತು ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಆದರೂ ಇದುವರೆಗೆ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ, ಉಪಾಧ್ಯಕ್ಷ ಗಿರೀಶ್ ಆರೋಪಿಸಿದ್ದಾರೆ.
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಂತ ಮನೆಗಳಿಲ್ಲದೆ, ಬಾಡಿಗೆ ಮನೆಯಲ್ಲಿರುವವರೇ ಹೆಚ್ಚಿದ್ದು, ಅವರುಗಳಿಗೆ ಅನುಕೂಲವಾಗುವಂತೆ ಹಂತ ಹಂತವಾಗಿ ನಿವೇಶನ ನೀಡಲು ಗ್ರಾಮ ಪಂಚಾಯಿತಿ ಸಭೆಗಳಲ್ಲಿ ತೀರ್ಮಾನವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರೂ ನಿವೇಶನ ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಕಂದಾಯ ಇಲಾಖೆಯವರು ಈಗಾಗಲೇ ಸರ್ವೆ ಮಾಡಿರುವ ಜಾಗವನ್ನು ಕ್ರಮಬದ್ಧವಾಗಿ ಗುರುತಿಸಿ ಕಡತವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಿ ಅವರ ಅನುಮೋದನೆ ಪಡೆದು ನಿವೇಶನ ರಹಿತರಿಗೆ ನಿವೇಶನ ನೀಡಲು ಅವಕಾಶ ಮಾಡಿಕೊಡಬೇಕು ಎಂದು ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ, ಉಪಾಧ್ಯಕ್ಷ ಗಿರೀಶ್, ಸದಸ್ಯರುಗಳಾದ ಕೆ.ವೈ. ರವಿ, ಈರಯ್ಯ, ಮೋಜಿನಿ, ಕೆ.ಬಿ. ರಾಮಚಂದ್ರ, ರತ್ನಮ್ಮ, ಹೆಚ್.ಎಸ್. ರವಿ, ಪುಷ್ಪ, ಜಯಶ್ರೀ, ಚಂದ್ರಿಕಾ, ಕಲ್ಪನಾ, ಟಿ.ಕೆ. ವಿಶ್ವನಾಥ, ಕೆ.ಜೆ. ಮಂಜು, ಕೆ.ಎ. ದಸ್ವಿ ಆಗ್ರಹಿಸಿದ್ದಾರೆ.