ಮಡಿಕೇರಿ, ಮೇ 11: ಕೃಷಿ ಇಲಾಖೆಯಿಂದ ನೂತನವಾಗಿ ಕೃಷಿ ಭಾಗ್ಯ ಯೋಜನೆ ಜಾರಿಯಾಗಿದ್ದು, ಈ ಯೋಜನೆಯಡಿ ರೈತರಿಗೆ ಉಚಿತವಾಗಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಡ ಲಾಗುವದೆಂದು ಅಧಿಕಾರಿ ಗಿರೀಶ್ ಅವರು ಮಡಿಕೇರಿ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದರು.

ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಿರೀಶ್ ಅವರು ಈ ಕುರಿತು ವಿವರಿಸಿದರು. ಈ ಯೋಜನೆಗೆ ಇಂತಿಷ್ಟು ಫಲಾನುಭವಿ ಗಳೆಂದು ನಿಗದಿ ಪಡಿಸಲಾಗಿದ್ದು, ಫಲಾನುಭವಿಗಳ ಅರ್ಜಿಗಳ ಸಂಖ್ಯೆ ಹೆಚ್ಚಾದಲ್ಲಿ ‘ಟಾಸ್’ ಮುಖಾಂತರ ಫಲಾನುಭವಿಗಳನ್ನು ಅಂತಿಮಗೊಳಿಸ ಲಾಗುವದು. 10 ಅಡಿ ಆಳದ ಕೃಷಿ ಹೊಂಡದೊಂದಿಗೆ ಡೀಸಲ್ ಪಂಪ್‍ಸೆಟ್‍ಗಳನ್ನು ಶೇ. 50ರ ರಿಯಾಯಿತಿ ದರದಲ್ಲಿ ವಿತರಿಸ ಲಾಗುತ್ತದೆ. ರಿಯಾಯಿತಿ ದರದಲ್ಲಿ ದೃಢೀಕೃತ ಭತ್ತದ ಬಿತ್ತನೆ ಬೀಜಗಳನ್ನು ಮಡಿಕೇರಿ, ಭಾಗಮಂಡಲ, ನಾಪೋಕ್ಲು ಹಾಗೂ ಸಂಪಾಜೆ ರೈತ ಸಂಪರ್ಕ ಕೇಂದ್ರಗಳಲ್ಲಿ ಜೂನ್ ಮೊದಲ ವಾರದಲ್ಲಿ ವಿತರಿಸಲಾಗುವದು ಎಂದು ಗಿರೀಶ್ ಮಾಹಿತಿಯಿತ್ತರು.

ಶೀಘ್ರ ದುರಸ್ಥಿ ಪಡಿಸಿ

ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ದುರಸ್ಥಿಗೊಳಿಸಬೇಕಾದ ಅಂಗನವಾಡಿ ಶಾಲೆಗಳನ್ನು ಮಳೆಗಾಲಕ್ಕೂ ಮುಂಚಿತವಾಗಿ ಸರಿಪಡಿಸಿ, ಹಾನಿಯಾಗುವದನ್ನು ತಪ್ಪಿಸುವಂತೆ ಅಧ್ಯಕ್ಷೆ ಶೋಭಾ ಮೋಹನ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ ಸೂಚಿಸಿದರು. ಇರುವಂತಹ ಅನುದಾನವನ್ನು ಸದ್ಭಳಕೆ ಮಾಡಿಕೊಂಡು ಕಾರ್ಯನಿರ್ವ ಹಿಸುವಂತೆ ಅಧಿಕಾರಿಗೆ ನಿರ್ದೇಶನ ವಿತ್ತರು. ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮ ಯೋಜನೆ ಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. 2006 ರಿಂದ 2017ರ ಫೆಬ್ರವರಿವರೆಗೆ 2821 ಭಾಗ್ಯಲಕ್ಷ್ಮಿ ಬಾಂಡ್‍ಗಳನ್ನು ವಿತರಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಹುದ್ದೆ ಭರ್ತಿ ಮಾಡಲು ಈಗಾಗಲೇ ಪ್ರಕಟಣೆ ಹೊರಡಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

ಸೆಸ್ಕ್‍ಗೆ ಸಿಬ್ಬಂದಿ ಕೊರತೆ

ತಾಲೂಕು ವ್ಯಾಪ್ತಿಯಲ್ಲಿ ಸೆಸ್ಕ್ ಲೈನ್‍ಮ್ಯಾನ್‍ಗಳು ಅಗತ್ಯಕ್ಕೆ ತಕ್ಕಷ್ಟು ಇಲ್ಲ. ಇರುವಂತವರನ್ನು ಬಳಸಿ ಕೊಂಡು ಸಮರ್ಪಕ ಕಾರ್ಯನಿರ್ವ ಹಣೆ ಅಸಾಧ್ಯ. ಈ ನಿಟ್ಟಿನಲ್ಲಿ ಲೈನ್‍ಮ್ಯಾನ್‍ಗಳ ಸಂಖ್ಯೆಯನ್ನು ಹೆಚ್ಚು ಮಾಡಬೇಕಿದೆ. ಲೈನ್‍ಮ್ಯಾನ್‍ಗಳ ಆಯ್ಕೆಯನ್ನು ಆಯಾ ಜಿಲ್ಲೆಗಳಲ್ಲಿ ಮಾಡಲು ಅವಕಾಶ ನೀಡಿದಲ್ಲಿ ಅನುಕೂಲಕರ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂತು. ಲೈನ್‍ಮ್ಯಾನ್‍ಗಳ ಕೊರತೆಯಿಂದ ಮಳೆಗಾಲದಲ್ಲಿ ಪರಿಸ್ಥಿತಿ ಬಿಗಡಾಯಿಸದಂತೆ ಕ್ರಮ ವಹಿಸಲು ಅಧ್ಯಕ್ಷರು ಅಧಿಕಾರಿಗೆ ಸೂಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಸಂತು ಸುಬ್ರಮಣಿ ಇಓ ಜೀವನ್ ಉಪಸ್ಥಿತರಿದ್ದರು.