ಒಡೆಯನಪುರ, ಮೇ 10: ಜಿಲ್ಲೆಯಿಂದ ನೆರೆ ಜಿಲ್ಲೆ ಹಾಸನಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ಇದ್ದು, ಗ್ರಾಮೀಣ ಭಾಗಗಳ ಸಂಪರ್ಕಕ್ಕೆ ಈ ರಸ್ತೆಗೆ ಅಡ್ಡಲಾಗಿರುವ ಹೊಳೆಗೆ ಸೇತುವೆ ಇಲ್ಲದೆ ಸುತ್ತಮುತ್ತಲಿನ ಗ್ರಾಮಸ್ಥರು ಬವಣೆ ಪಡುತ್ತಿದ್ದು, ಸರಕಾರ ಇತ್ತ ಗಮನಹರಿಸಿ ಸೇತುವೆ ನಿರ್ಮಿಸುವಂತೆ ಉಭಯ ಜಿಲ್ಲೆಗಳ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ.
ಗೌಡಳ್ಳಿ ಗ್ರಾ.ಪಂ.ಗೆ ಸೇರಿದ ರಾಮನಹಳ್ಳಿಯಲ್ಲಿ ಶನಿವಾರಸಂತೆ-ಗುಡುಗಳಲೆ ಮೂಲಕವಾಗಿ ಹರಿಯುವ ಹೊಳೆಯೊಂದಿದೆ. ಈ ಹೊಳೆಯನ್ನು ಶನಿವಾರಸಂತೆ ಹೊಳೆ ಎಂದೇ ಕರೆಯುತ್ತಾರೆ. ರಾಮನಹಳ್ಳಿ ಗ್ರಾಮದಿಂದ ಹೊಳೆಯ ಆಚೆ ಬದಿಯನ್ನು ದಾಟಿದರೆ ಶನಿವಾರಸಂತೆ ಸಮೀಪದ ಚಿನ್ನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೊಂದಿದೆ. ಈ ರಸ್ತೆ ಕೊಡಗು ಜಿಲ್ಲೆಗೆ ಸೇರಿದ ಚಿನ್ನಳ್ಳಿ ಗ್ರಾಮದ ಮೂಲಕ ಜಿಲ್ಲೆಯ ಗಡಿಭಾಗದಲ್ಲಿರುವ ಹಾಸನ ಜಿಲ್ಲೆಗೆ ಒಳಪಡುವ ಈಚಲಬೀಡು, ಕಳಲೆ ಹಾಗೂ ಹೊಸೂರು ಮುಂತಾದ ಕಡೆಗೆ ಹೋಗುವ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯಲ್ಲಿ ಉಭಯ ಜಿಲ್ಲೆಗಳ ಗ್ರಾಮಸ್ಥರು ದ್ವಿಚಕ್ರ ವಾಹನ, ಕಾರು-ಜೀಪುಗಳಲ್ಲಿ ಸಂಚರಿಸಬಹುದಾಗಿದೆ. ಆದರೆ ಸಮಸ್ಯೆಯಾಗಿರುವದು ರಾಮನಹಳ್ಳಿ ಗ್ರಾಮದಲ್ಲಿ ಹರಿಯುವ ಶನಿವಾರಸಂತೆ ಹೊಳೆಗೆ ಸೇತುವೆ ಸಂಪರ್ಕ ಇಲ್ಲದಿರುವದು. ಹಲವಾರು ವರ್ಷಗಳಿಂದ ಗ್ರಾಮಸ್ಥರು ಹೊಳೆಗೆ ಅಡ್ಡಲಾಗಿ ಮರದ ದಿಮ್ಮಿ ಮತ್ತು ಮರದ ಹಲಿಗೆಗಳನ್ನು ಅಳವಡಿಸಿಕೊಂಡು ತಾವೇ ಸೇತುವೆಯನ್ನು ನಿರ್ಮಿಸಿಕೊಂಡಿದ್ದಾರೆ. ಹೊಳೆಯ 2 ಬದಿಗಳಲ್ಲಿರುವ ಗ್ರಾಮಸ್ಥರು ವಾಹನಗಳನ್ನು ಹೊಳೆಯ ಬದಿಯಲ್ಲಿ ಬಿಟ್ಟು ಮರದ ಸೇತುವೆಯ ಮೂಲಕ ನಡೆದುಕೊಂಡು ಬಂದು ಪಕ್ಕದ ಊರುಗಳಿಗೆ ಹೋಗುತ್ತಿದ್ದಾರೆ. ರಾಮನಹಳ್ಳಿ ಗ್ರಾಮದಲ್ಲಿ ಹರಿಯುವ ಹೊಳೆಗೆ ಸೇತುವೆ ನಿರ್ಮಿಸಿದರೆ ಒಟ್ಟು 7 ಕಿ.ಮೀ. ದೂರ ಉಳಿತಾಯವಾಗುತ್ತದೆ. ಈಗ ಚಿನ್ನಳ್ಳಿ, ಹೊಸೂರು ಹಾಗೂ ರಾಮನಹಳ್ಳಿ ಗ್ರಾಮಸ್ಥರು ಸೋಮವಾರಪೇಟೆ, ಮಡಿಕೇರಿ ಮುಂತಾದ ಕಡೆಗಳಿಗೆ ಹೋಗಬೇಕಾದರೆ ಗೋಪಾಲಪುರ, ಶನಿವಾರಸಂತೆ ಮೂಲಕವಾಗಿ 7 ಕಿ.ಮೀ. ದೂರ ಸುತ್ತು ಬಳಸಿಕೊಂಡು ಹೋಗಬೇಕಾಗಿದೆ. ರಾಮನಹಳ್ಳಿ ಮತ್ತು ಚಿನ್ನಳ್ಳಿ ಭಾಗದ ಕಡೆಗಳಲ್ಲಿ ನಬಾರ್ಡ್‍ನಿಂದ ರಸ್ತೆಯನ್ನು ನಿರ್ಮಿಸಿದ್ದರೂ ಹೊಳೆಗೆ ಅಡ್ಡಲಾಗಿ ಸೇತುವೆ ನಿರ್ಮಿಸದಿರುವದು ಉಭಯ ಭಾಗದ ಜನರಿಗೆ ಅಸಮಾಧಾನ ತಂದಿದೆ. ಹಲವಾರು ವರ್ಷಗಳಿಂದ ರಾಮನಹಳ್ಳಿ ಭಾಗದ ಜನರು, ರೈತರು ಹಾಗೂ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಹೊಳೆಗೆ ಅಡ್ಡಲಾಗಿ ಗ್ರಾಮಸ್ಥರು ನಿರ್ಮಿಸಿರುವ ಮರದ ಸೇತುವೆ ಮೂಲಕ ನಡೆದುಕೊಂಡು ಹೋಗುತ್ತಿದ್ದಾರೆ. ಆದರೆ ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುವದರಿಂದ ಮರದ ಹಲಿಗೆಯಲ್ಲಿ ನಿರ್ಮಿಸಿದ ಸೇತುವೆ ಮುಳುಗಿ ಹೋಗುತ್ತದೆ. ಇಲ್ಲಿ ಹೊಳೆಗೆ ಸೇತುವೆ ನಿರ್ಮಿಸುವಂತೆ ಉಭಯ ಕಡೆಯ ಗ್ರಾಮಸ್ಥರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಹಲವಾರು ವರ್ಷಗಳಿಂದ ಸರಕಾರಕ್ಕೆ ಮನವಿ ನೀಡಿದ್ದರೂ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಸ್ಥಳೀಯ ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳಿಗೆ ರಾಮನಹಳ್ಳಿ ಗ್ರಾಮದಲ್ಲಿ ಹೊಳೆ ಇರುವದು ಹಾಗೂ ತೊಂದರೆ ಅನುಭವಿಸುತ್ತಿರುವ ಬಗ್ಗೆ ಮಾಹಿತಿ ಇಲ್ಲದಿರುವದು ಅಚ್ಚರಿಯಾಗಿದೆ.
ಈ ಹೊಳೆಗೆ ಸೇತುವೆ ನಿರ್ಮಿಸಿದರೆ ಹೊಳೆಯ ಆಚೆ ಬದಿಯಲ್ಲಿರುವ ಹಲವಾರು ಗ್ರಾಮಗಳಿಗೆ ಸುಲಭವಾಗಿ ಹೋಗಬಹುದು, ಹಲವಾರು ವರ್ಷಗಳಿಂದ ಸೇತುವೆ ನಿರ್ಮಿಸುವಂತೆ ಸರಕಾರಕ್ಕೆ ಮನವಿ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಅಲ್ಲದೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳು ಇತ್ತ ಒಮ್ಮೆಯೂ ಬಂದಿಲ್ಲ ಎಂದು ಗ್ರಾಮವಾಸಿಗಳಾದ ದಿನೇಶ್, ದೀಪಕ್, ಲೋಕೇಶ್ ಇವರುಗಳು ಅಭಿಪ್ರಾಯಪಟ್ಟಿದ್ದಾರೆ. ಇನ್ನಾದರೂ ಇತ್ತ ಗಮನಹರಿಸುವಂತೆ ಆಗ್ರಹಿಸಿದ್ದಾರೆ.
ಚಿತ್ರ-ವರದಿಃ ವಿ.ಸಿ. ಸುರೇಶ್, ದಿನೇಶ್ ಮಾಲಂಬಿ