ಗೋಣಿಕೊಪ್ಪಲು, ಮೇ 14: ಗೋಣಿಕೊಪ್ಪ ಪಟ್ಟಣದ ಮುಖ್ಯರಸ್ತೆಯನ್ನು ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡುವ ಮೂಲಕ ಟ್ರಾಫಿಕ್ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.ಚೇಂಬರ್ ಆಫ್ ಕಾಮರ್ಸ್ ಕಚೇರಿಯಲ್ಲಿ ಪೊಲೀಸ್ ಇಲಾಖೆಯೊಂದಿಗೆ ನಡೆದ ಟ್ರಾಫಿಕ್ ನಿಯಂತ್ರಣ ಸಾರ್ವಜನಿಕರ ಸಭೆಯಲ್ಲಿ ಚೇಂಬರ್ ಅಧ್ಯಕ್ಷ ಸುನಿಲ್ ಮಾದಪ್ಪ ಹಾಗೂ ಪದಾಧಿಕಾರಿಗಳು ಇಲಾಖೆಯನ್ನು ಒತ್ತಾಯಿಸಿದರು.
ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಟ್ರಾಫಿಕ್ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ. ಇದರಿಂದಾಗಿ ಮುಖ್ಯರಸ್ತೆಯನ್ನು ಏಕಮುಖ ಸಂಚಾರಕ್ಕೆ ಪರಿವರ್ತಿಸುವಂತೆ ಒತ್ತಾಯಿಸಿದರು.
ಬೈಪಾಸ್ ರಸ್ತೆಯನ್ನು ಪರ್ಯಾಯ ರಸ್ತೆಯಾಗಿ ಪರಿಗಣಿಸಬೇಕು. ಇದರಿಂದ ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ ಎಂದು ಒತ್ತಾಯಿಸಿದಾಗ ಏಕಮುಖ ಸಂಚಾರದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸುವದಾಗಿ ಉಪ ನಿರೀಕ್ಷಕ ರಾಜು ತಿಳಿಸಿದರು.
ಸಭೆಯಲ್ಲಿ ಚೇಂಬರ್ ಜಿಲ್ಲಾಧ್ಯಕ್ಷ ಬಿ ಎನ್ ಪ್ರಕಾಶ್, ಸ್ಥಳೀಯ ಚೇಂಬರ್ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಕಾರ್ಯದರ್ಶಿ ಕಾಶಿ ಸಾರ್ವಜನಿಕರು ಉಪಸ್ಥಿತರಿದ್ದರು.