ವೀರಾಜಪೇಟೆ, ಮೇ 10: ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ತಂಡ ಭೇಟಿ ನೀಡಿ ಮೌಲ್ಯಮಾಪನ ನಡೆಸಿ “ಬಿ” ಗ್ರೇಡ್ ಧೃಢೀಕರಣ ನೀಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲೆ ಡಾ. ಡಿ.ಕೆ. ಸರಸ್ವತಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2007ರಲ್ಲಿ ಕೇವಲ 120 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಲ್ಲಿ 703 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಿ.ಎ, ಬಿಕಾಂ, ಬಿಬಿಎಂ ಪದವಿಗಳು 2 ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ ಫಲಿತಾಂಶ ಉತ್ತಮವಾಗಿದೆ. ಕಾಲೇಜಿನಲ್ಲಿ 7 ಖಾಯಂ ಪ್ರಾಧ್ಯಾಪಕರಿದ್ದು, 36 ಅತಿಥಿ ಉಪನ್ಯಾಸಕರಿದ್ದಾರೆ. 5 ಜನ ಸಿಬ್ಬಂದಿ ವರ್ಗದವರಿದ್ದಾರೆ ಎಂದರು.

ಇತ್ತೀಚೆಗೆ ನ್ಯಾಕ್ ತಂಡದ ಒರಿಸ್ಸಾ ವಿಶ್ವವಿದ್ಯಾಲಯದ ಪ್ರೊ. ಮೋಹಾಪಾತ್ರ, ರಾಜಸ್ಥಾನದ ಕೋಟಾ ವಿಶ್ವವಿದ್ಯಾಲಯದ ಪ್ರೊ. ಗೋಯಲ್, ಕೊಟ್ಟಾಯಂನ ಡಾ. ರಾಜು ಜಾರ್ಜ್ ಒಳಗೊಂಡ ತಂಡ ಭೇಟ ನೀಡಿ ಪರಿಶೀಲನೆ ನಡೆಸಿತು. ಅಲ್ಲದೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರೊಂದಿಗೆ ಸಂವಾದ ನಡೆಸಿತು. ವಿದ್ಯಾರ್ಥಿಗಳು, ಪೋಷಕರು, ಶಾಲಾಭಿವೃದ್ಧಿ ಸಮಿತಿ ಹಾಗೂ ಉತ್ತಮ ಪ್ರಾಧ್ಯಾಪಕರ ತಂಡದಿಂದ “ಬಿ” ಗ್ರೇಡ್ ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಟಿ.ಕೆ. ಬೋಪಯ್ಯ ಉಪಸ್ಥಿತರಿದ್ದರು.