ಮಡಿಕೇರಿ, ಮೇ 10: ಹನ್ನೊಂದು ವರ್ಷ ಹಿಂದೆ ಹಠಾತ್ ಕಾಣೆಯಾಗಿರುವ ತಮ್ಮ ಮಗ ಮನೆಗೆ ಒಂದಿಲ್ಲೊಂದು ದಿನ ಬಂದೇ ಬರುತ್ತಾನೆ ಎಂಬ ವಿಶ್ವಾಸದಲ್ಲಿ ಆತನ ಹೆತ್ತವರು ಕಾಯುತ್ತಿದ್ದು, ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವಾಲಯದೊಂದಿಗೆ ವ್ಯವಹರಿಸಿ, ಹೆತ್ತವರಿಗೆ ಮಗನನ್ನು ಒಪ್ಪಿಸಲು ಪ್ರಯತ್ನಿಸುವದಾಗಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಭರವಸೆ ನೀಡಿದ್ದಾರೆ.ಗೋಣಿಕೊಪ್ಪಲು ಬಳಿಯ ಕೈಕೇರಿ ನಿವಾಸಿ ಪಡಿಕಲ್ ಕುಶಾಲಪ್ಪ ಹಾಗೂ ಮೀನಾಕ್ಷಿ ದಂಪತಿಯ ಪುತ್ರ ಪಿ.ಕೆ. ಯಶವಂತ್ 2006ರಲ್ಲಿ ಮೈಸೂರಿನಲ್ಲಿ ವಿದ್ಯಾಭ್ಯಾಸ ವೇಳೆ ದಿಢೀರ್ ಆಗಿ ನಾಪತ್ತೆಯಾಗಿದ್ದು, ಆನಂತರದಲ್ಲಿ ಈತ ಪಾಕಿಸ್ತಾನದ ಲಾಹೋರ್‍ನ ಕಾರಾಗೃಹವೊಂದರಲ್ಲಿ ಬಂಧನದಲ್ಲಿರುವ ವಿಷಯ ಬೆಳಕಿಗೆ ಬಂದಿತ್ತು.

ಆ ಬೆನ್ನಲ್ಲೇ ಹೆತ್ತವರು ತಮ್ಮ ಮಗನನ್ನು ಲಾಹೋರ್‍ನಿಂದ ಬಿಡಿಸಿಕೊಂಡು ಬರುವಲ್ಲಿ ನಿರಂತರ ಪ್ರಯತ್ನ ನಡೆಸಿದ್ದು, ಕಳೆದ ವರ್ಷ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಮೂಲಕ ಮಗನ ಬಿಡುಗಡೆಗೆ ಕೋರಿ ವ್ಯವಹರಿಸಿದ್ದರು.

ಈ ನಡುವೆ ಕೇಂದ್ರ ವಿದೇಶಾಂಗ ಸಚಿವರು

(ಮೊದಲ ಪುಟದಿಂದ) ಪಾಕಿಸ್ತಾನದಲ್ಲಿರುವ ಭಾರತದ ಹೈಕಮೀಷನರ್ ಕಚೇರಿ ಸಂಪರ್ಕಿಸಿ ಯಶವಂತನ ಕುರಿತಾಗಿ ಮಾಹಿತಿ ಸಂಗ್ರಹಿಸಿದ್ದರು. ಈ ವೇಳೆ ಪಾಕಿಸ್ತಾನದ ಲಾಹೋರ್‍ನಲ್ಲಿ ಬಂಧನದಲ್ಲಿರುವ ಯಶವಂತ ಮಾನಸಿಕವಾಗಿ ಅಸ್ವಸ್ಥತೆಯಿಂದ ಬಳಲುತ್ತಿರುವ ಸಂಗತಿ ತಿಳಿದು ಬಂದಿದೆ.

ಅಲ್ಲದೆ ಅಲ್ಲಿಂದ ರವಾನೆಯಾಗಿರುವ ಭಾವಚಿತ್ರ ಸಹಿತ ತಮ್ಮ ಮಗನ ಚಹರೆಯನ್ನೇ ಹೋಲುವ ಎಲ್ಲ ಅಂಶಗಳು ಖಾತರಿಯಾದರೂ, ಹೆಸರು ಮಾತ್ರ ರಮೇಶ್ ಎಂದು ನಮೂದಾಗಿರುವ ಬಗ್ಗೆ ಹೆತ್ತವರಲ್ಲಿ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.

ಈ ಬಗ್ಗೆ ಪೋಷಕರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ತಮ್ಮ ವಕೀಲರ ಮೂಲಕ ಮೊಕದ್ದಮೆ ದಾಖಲಿಸಿ, ಲಾಹೋರ್‍ನಲ್ಲಿ ಬಂದಿಯಾಗಿರುವ ತಮ್ಮ ಮಗನನ್ನು ಭಾರತಕ್ಕೆ ಕರೆತರುವದಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರಾಮಾಣಿಕ ನೆಲೆಯಲ್ಲಿ ಕಾರ್ಯೋನ್ಮುಖವಾಗುವಂತೆ ನಿರ್ದೇಶಿಸಲು ಕೋರಿದ್ದಾರೆ.

ಆ ಮೇರೆಗೆ ಕಾನೂನು ಪ್ರಕ್ರಿಯೆಗಳು ನಡೆದು, ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್ ಕಚೇರಿಯಿಂದ ಕೆಲವು ಮಹತ್ವದ ವಿಚಾರಗಳು ಲಭ್ಯವಾಗಿದ್ದು, ಈ ಹಿಂದೆ ಯಶವಂತ್ ಭಾರತದಿಂದ ಕಾಣೆಯಾದಾಗ ಇದ್ದಂತಹ ರೀತಿ, ಅನಂತರ ಬಂದಿಯಾದ ಸಂದರ್ಭದ ಚಿತ್ರ ಹಾಗೂ ಪ್ರಸಕ್ತ ಆತನಿರುವ ನೈಜ ಚಿತ್ರವನ್ನು ಹೆತ್ತವರಿಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಮಧ್ಯೆ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಅವರಿಂದ ಯಶವಂತನ ಬಗ್ಗೆ ಮಾಹಿತಿ ಪಡೆದು, ಖುದ್ದಾಗಿ ಆತನ ಹೆತ್ತವರ ಮನೆಗೆ ತೆರಳಿ ಭೇಟಿಯಾಗಿದ್ದಾರೆ.

ಯಶವಂತನ ಪೋಷಕರಿಂದ ಇದುವರೆಗಿನ ಮಾಹಿತಿ ಕಲೆ ಹಾಕಿರುವ ಸುನಿಲ್ ಸುಬ್ರಮಣಿ, ಸಂಬಂಧಿಸಿದ ದಾಖಲೆಗಳನ್ನು ಪಡೆದು, ಭಾರತ ಸರಕಾರ ಹಾಗೂ ವಿದೇಶಾಂಗ ಸಚಿವಾಲಯ ಅಧಿಕಾರಿಗಳೊಂದಿಗೆ ವ್ಯವಹರಿಸುವ ಭರವಸೆ ನೀಡಿದ್ದಾರೆ.

ಆ ಮುಖಾಂತರ ತಾವೇ ಖುದ್ದಾಗಿ ದೆಹಲಿ ಅಧಿಕಾರಿಗಳನ್ನು ಸಂಪರ್ಕಿಸಿ, ಯಶವಂತನನ್ನು ಹೇಗಾದರೂ ಬಂಧಮುಕ್ತಗೊಳಿಸಿ ಪೋಷಕರ ವಶಕ್ಕೆ ಒಪ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ನೆಲೆಯಲ್ಲಿ ಪ್ರಯತ್ನಿಸುವ ಆಶ್ವಾಸನೆ ನೀಡಿದ್ದಾರೆ. ಈ ಭರವಸೆಯಿಂದ ಹೆತ್ತವರಲ್ಲಿ ಮತ್ತೆ 11 ವರ್ಷಗಳಿಂದ ದೂರವಾಗಿರುವ ಮಗನನ್ನು ಮನೆ ತುಂಬಿಸಿಕೊಳ್ಳುವ ಆಸೆ ಚಿಗುರಿದೆ. -ಶ್ರೀಸುತ