ಕೂಡಿಗೆ, ಮೇ 11: ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ಇಂದು ಎಲ್ಲಿ ನೋಡಿದರಲ್ಲಿ ಪೊಲೀಸರೇ ಕಂಡುಬಂದರು. ಈ ಆದಿವಾಸಿಗಳ ಕೇಂದ್ರಕ್ಕೆ 650ಕ್ಕೂ ಹೆಚ್ಚು ಕುಟುಂಬಗಳು ಬಂದಿದ್ದಾರೆ. ದಿಡ್ಡಳ್ಳಿಯಿಂದ ಬ್ಯಾಡಗೊಟ್ಟಕ್ಕೆ ಗುರುತಿಸಲ್ಪಟ್ಟ ಕುಟುಂಬಗಳು 528. ಆದರೆ ಈ ಕೇಂದ್ರದಲ್ಲಿ ದಿನ ಕಳೆದಂತೆ ಹೊಸ ಕುಟುಂಬಗಳು ರಾತೋ ರಾತ್ರಿ ಸೇರ್ಪಡೆಗೊಳ್ಳುತ್ತಿವೆ. ಇದರಿಂದ ಜಿಲ್ಲಾಡಳಿತ ತೀರ್ಮಾನಿಸಿದಂತೆ ಇವರುಗಳಿಗೆ ವಿತರಣೆ ಮಾಡಲು ತಂದ ಆಹಾರ ಸಾಮಗ್ರಿಗಳು ವಿತರಣೆ ಮಾಡುವ ಸಂದರ್ಭ ಕಡಿಮೆ ಕಂಡುಬರುತ್ತಿದೆ.

ಜಿಲ್ಲಾಡಳಿತ ನಿರ್ಧರಿಸಿದಂತೆ ಬಸವನಹಳ್ಳಿಗೆ 184 ನಿವೇಶನಗಳು, ಬ್ಯಾಡಗೊಟ್ಟಕ್ಕೆ 327 ನಿವೇಶನಗಳನ್ನು ಗುರುತು ಮಾಡಲಾಗಿದ್ದರೂ, ಇದೀಗ ಕಳೆದೆರಡು ದಿನಗಳಿಂದ 116 ಹೊರ ಜಿಲ್ಲೆಯ ಕುಟುಂಬಗಳು ಬಂದು ಸೇರ್ಪಡೆಗೊಂಡಿದ್ದು, ಇವರುಗಳಿಗೆ ಯಾವದೇ ದಾಖಲಾತಿಗಳು ಇಲ್ಲ. ಆದ್ದರಿಂದ ಆಹಾರ ಧಾನ್ಯಗಳು ಮತ್ತು ಇತರೆ ವಸ್ತುಗಳ ವಿತರಣೆಗೆ ತೊಂದರೆಯಾಗುತ್ತಿರುವದು ಕಂಡುಬಂದಿತು.

ಇದನ್ನು ಅರಿತ ಜಿಲ್ಲಾಡಳಿತ ಭಾರೀ ಪೊಲೀಸ್ ಬಿಗಿ ಬಂದೋಬಸ್ತ್‍ನೊಂದಿಗೆ ತಾಲೂಕು ತಹಶೀಲ್ದಾರ್ ಅವರ ನೇತೃತ್ವದಲ್ಲಿ ಇಂದು ಕುಟುಂಬಗಳ ಗುರುತಿಸುವಿಕೆಯ ಕಾರ್ಯ ಪ್ರಾರಂಭವಾಯಿತು. ಬೆಳಗ್ಗಿನಿಂದಲೇ ಬ್ಯಾಡಗೊಟ್ಟ ಆದಿವಾಸಿಗಳ ಕೇಂದ್ರದ ಮುಖ್ಯದ್ವಾರದಲ್ಲಿ ಕಬ್ಬಿಣದ ಗೇಟ್ ಇರುವದರಿಂದ ಯಾವದೇ ವಾಹನವನ್ನು ಒಳಗಡೆ ಬಿಡದಂತೆ ತಡೆಯಲಾಗುತ್ತಿತ್ತು. ಕಂದಾಯ ಅಧಿಕಾರಿಗಳು ಕೇಂದ್ರದಲ್ಲಿ ಧ್ವನಿವರ್ಧಕದ ಮೂಲಕ ಈಗಾಗಲೇ ನೋಂದಣಿಯಾಗಿದ್ದ ಕುಟುಂಬದ ಸದಸ್ಯರುಗಳ ಹೆಸರನ್ನು ಕರೆದು ಅವರುಗಳ ಭಾವಚಿತ್ರ ತೆಗೆದು ಅವರುಗಳಿಗೆ ನಿವೇಶನ ನೀಡುವ ಚೀಟಿಗಳನ್ನು ಹಂಚಲಾಯಿತು. ಈ ಕೇಂದ್ರದಲ್ಲಿ ಇದುವರೆಗೆ 2500 ಕ್ಕೂ ಅಧಿಕ ಜನರಿದ್ದು, ಆಯ್ಕೆಗೊಂಡ ಆದಿವಾಸಿ

(ಮೊದಲ ಪುಟದಿಂದ) ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಬಂದೋಬಸ್ತ್‍ನೊಂದಿಗೆ ನಡೆಯಿತು.

ಇದರಲ್ಲಿ ಹೊರ ಜಿಲ್ಲೆಯ ಕುಟುಂಬದವರು ಅಧಿಕಾರಿಗಳೊಂದಿಗೆ ಮಾತನಾಡಿ, ನಾವು ಸಹ ಕೊಡಗಿನ ಆದಿವಾಸಿಗಳಾಗಿದ್ದು, ನಮಗೆ ದಾಖಲಾತಿಗಳಿವೆ. ನಾಲ್ಕು ದಿನಗಳ ಕಾಲಾವಕಾಶ ನೀಡಿ, ನಾವು ದಾಖಲಾತಿಗಳನ್ನು ಒದಗಿಸುತ್ತೇವೆ ಎಂದು ಆದಿವಾಸಿಗಳ ಅಪ್ಪು, ನಾಣಿ ಅಧಿಕಾರಿಗಳಿಗೆ ಹೇಳುತ್ತಿದ್ದುದು ಕಂಡುಬಂದಿತು.

ಈಗಾಗಲೇ ಬ್ಯಾಡಗೊಟ್ಟ ಗ್ರಾಮದಲ್ಲಿ 175 ನಿವೇಶನಗಳ ಗುರುತಿಸುವಿಕೆ ನಡೆದಿದ್ದು, ಇದರ ಜೊತೆಯಲ್ಲಿ ಇನ್ನೂ ಹೆಚ್ಚಿನ ಜಾಗವನ್ನು ಸಮತಟ್ಟುಗೊಳಿಸಿ ನಿವೇಶನ ಗುರುತಿಸುವಿಕೆ ಕಾರ್ಯ ಇಲಾಖೆಯ ವತಿಯಿಂದ ನಡೆಯುತ್ತಿದೆ. ಆದಿವಾಸಿಗಳಿಗೆ ತಾತ್ಕಾಲಿಕ ಶೆಡ್‍ಗಳ ಜೊತೆಗೆ ಶೌಚಾಲಯದ ವ್ಯವಸ್ಥೆ ಕಾರ್ಯವೂ ಭರದಿಂದ ಸಾಗುತ್ತಿದೆ.ನಿರಾಶ್ರಿತರ ಪಟ್ಟಿಯಲ್ಲಿ ಇಲ್ಲದವರು ವಾಪಾಸ್

ಬ್ಯಾಡಗೊಟ್ಟದಲ್ಲಿ ದಿಡ್ಡಳ್ಳಿ ನಿರಾಶ್ರಿತರ ಗುರುತಿಸುವಿಕೆಯ ಕಾರ್ಯದಲ್ಲಿ 259 ಕುಟುಂಬಗಳು ನೋಂದಣಿಯಾಗಿವೆ.

ದಿಡ್ಡಳ್ಳಿಯಲ್ಲಿ ತಯಾರಿಸಿದ ಪಟ್ಟಿಗನುಗುಣವಾಗಿ 528 ನಿರಾಶ್ರಿತ ಕುಟುಂಬಗಳಿಗೆ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟದಲ್ಲಿ ನಿವೇಶನ ನೀಡುವದಾಗಿ ಜಿಲ್ಲಾಡಳಿತ ತೀರ್ಮಾನಿಸಿತ್ತು. ಅದರಂತೆ ಬ್ಯಾಡಗೊಟ್ಟದಲ್ಲಿ 259 ಕುಟುಂಬಗಳು ಮತ್ತು ಬಸವನಹಳ್ಳಿಯಲ್ಲಿ 179 ಕುಟುಂಬಗಳನ್ನು ನೋಂದಣಿ ಮಾಡಿಕೊಂಡು ನಿವೇಶನ ನೀಡಲು ಚೀಟಿಯನ್ನು ವಿತರಣೆ ಮಾಡಲಾಗಿದೆ. ಜಿಲ್ಲಾಡಳಿತದ ಆದೇಶದಂತೆ ದಿಡ್ಡಳ್ಳಿಯಲ್ಲಿ ತಯಾರಿಸಿದ ಪಟ್ಟಿಯಲ್ಲಿ ನೋಂದಣಿಯಾಗಿರುವ ಕುಟುಂಬಗಳಿಗೆ ಮಾತ್ರ ಈ ಎರಡು ಕೇಂದ್ರದಲ್ಲಿ ನಿವೇಶನ ನೀಡುವದು ಎಂಬ ವಿಚಾರವನ್ನು ಅಧಿಕಾರಿಗಳು ಘೋಷಿಸಿದ್ದಾರೆ. ಈಗಾಗಲೇ ಬ್ಯಾಡಗೊಟ್ಟ ಕೇಂದ್ರಕ್ಕೆ ಬಂದಿದ್ದ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದ ಮಂದಿಯನ್ನು ಪೊಲೀಸರು ಮರಳಿ ಅವರ ಸ್ಥಳಕ್ಕೆ ಕಳುಹಿಸಿದ್ದಾರೆ. ನಿವೇಶನ ಸಿಗದ ಸೂಚನೆಯನ್ನರಿತ ಕೆಲವು ಮಂದಿ ತಾವೇ ಬ್ಯಾಡಗೊಟ್ಟ ಕೇಂದ್ರವನ್ನು ಬಿಟ್ಟು ಅವರು ಬಂದಲ್ಲಿಗೆ ಸ್ವ ಇಚ್ಚೆಯಿಂದ ತೆರಳುತ್ತಿದ್ದಾರೆ.

ನಿರಾಶ್ರಿತರ ಕೇಂದ್ರದಿಂದ ಹೊರಬಂದ ಕುಟುಂಬಗಳು ಕೂಡಿಗೆ ಪಟ್ಟಣದಲ್ಲಿ ಆತಂಕದಲ್ಲಿದ್ದುದನ್ನು ಕಂಡ ರಾಜ್ಯ ಕಾಂಗ್ರೆಸ್ ಐ.ಎನ್.ಟಿ.ಯೂ.ಸಿ. ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಹಾಗೂ ಮಾಜಿ ಜಿ.ಪಂ. ಅಧ್ಯಕ್ಷ ಎಸ್.ಎನ್. ರಾಜಾರಾವ್ ಆದಿವಾಸಿ ಕುಟುಂಬಗಳನ್ನು 2 ಲಾರಿಗಳಲ್ಲಿ ಕಳುಹಿಸಿ ಮಾನವೀಯತೆ ಮೆರೆದರು.