ಗುಡ್ಡೆಹೊಸೂರು, ಮೇ 10: ಇಲ್ಲಿನ ಅತ್ತೂರು ಗ್ರಾಮದ ನಿವಾಸಿ ಪೂಜಾರಿಮನೆ ಕಿರಣ್ ಎಂಬವರು ತಮ್ಮ ಜಾಗದಲ್ಲಿ ದನದಕೊಟ್ಟಿಗೆ ನಿರ್ಮಿಸಲು ಜೆ.ಸಿ.ಬಿ ಯಂತ್ರದ ಸಹಾಯದಿಂದ ತಳಪಾಯಕ್ಕೆ ಮಣ್ಣು ಕೆಲಸ ನಡೆಸುತ್ತಿದ್ದ ಸಂದರ್ಭ ಭಾರೀ ಗಾತ್ರದ ಚಪ್ಪಡಿ ಕಲ್ಲುಗಳು ಪತ್ತೆಯಾಗಿವೆ. ಈ ಕಲ್ಲುಗಳು ಪುರಾತನ ಕಾಲದಾಗಿದ್ದು, ಇವುಗಳ ಮೇಲೆ ದೊಡ್ಡ ದೊಡ್ಡ ಬಂಡೆಕಲ್ಲುಗಳನ್ನು ಇರಿಸಲಾಗಿತ್ತು.

ಈ ರೀತಿಯ ಕಲ್ಲುಗಳು ಅತ್ತೂರು ವಿಭಾಗದಲ್ಲಿ ಈ ಹಿಂದೆಯೂ ಕಂಡುಬಂದಿತ್ತು. ಅಲ್ಲಿನ ನಿವಾಸಿ ತಾ.ಪಂ.ಮಾಜಿ ಸದಸ್ಯ ಜೇರ್ಮಿ ಡಿಸೋಜಾ ಅವರ ಜಮೀನಿನಲ್ಲಿಯೂ ಪತ್ತೆಯಾಗಿತ್ತು. ಅಲ್ಲದೆ ಸೋಮಯ್ಯ ಎಂಬವರ ಜಾಗದಲ್ಲಿಯು ದೊರೆತಿದೆ. ಜ್ಯೋತಿಷಿಗಳ ಮೋರೆ ಹೋಗಿ ಈ ವಿಷಯ ತಿಳಿಸಿದಾಗ ಪುರಾತನ ಕಾಲದಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂಬದಾಗಿ ವಿವರಣೆ ನೀಡಿರುವ ದಾಗಿ ಕಿರಣ್ ತಿಳಿಸಿದ್ದಾರೆ. ಜನವಲಯದಲ್ಲಿ ಈ ಬಗ್ಗೆ ಊಹಾಪೋಹ ಹಬ್ಬಿಕೊಂಡಿದ್ದು, ಹಿಂದೆ ಹಿರಿಯರು ನಿಧಿ ಹುದುಗಿಸಿಟ್ಟಿರಬಹುದೆಂಬ ಸಂಶಯ ವ್ಯಕ್ತಗೊಳ್ಳುತ್ತಿದೆ. -ಗಣೇಶ್ ಕುಡೆಕ್ಕಲ್