ಮಡಿಕೇರಿ, ಮೇ 10: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಗರದಲ್ಲಿ ಆಯೋಜಿಸಿರುವ ಬೇಸಿಗೆ ಶಿಬಿರದಿಂದ ತಪ್ಪಿಸಿಕೊಂಡಿರುವ ಮೂವರು ಮಕ್ಕಳ ಪತ್ತೆಗಾಗಿ ಇಂದು ಕೂಡ ಹುಡುಕಾಟ ಮುಂದುವರಿದಿದೆ.

ತಾ. 8 ರಂದು ಹದಿನಾಲ್ಕು ವರ್ಷ, 12 ವರ್ಷದ ಇಬ್ಬರು ಅಕ್ಕ-ತಮ್ಮ ಹಾಗೂ 9 ವರ್ಷದ ಕಿರಿಯ ಸಹೋದರಿ ಒಗ್ಗೂಡಿ ತಪ್ಪಿಸಿಕೊಂಡ ಬೆನ್ನಲ್ಲೇ ಇಲಾಖೆಯ ವತಿಯಿಂದ ಈ ಬಗ್ಗೆ ಪೊಲೀಸ್ ಪುಕಾರು ನೀಡಲಾಗಿದೆ.

ಇಲ್ಲಿನ ಬಾಲಕಿಯರ ಬಾಲಮಂದಿರದಿಂದ ಕಾಣೆಯಾಗಿ ರುವ ಮಕ್ಕಳಿಗಾಗಿ ಹುಡುಕಾಟ ಆರಂಭಗೊಂಡಿದ್ದು, ಇಂದು ಬೆಳಿಗ್ಗೆ ಬಾಳೆಲೆ ವ್ಯಾಪ್ತಿಯಲ್ಲಿ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಅಷ್ಟರಲ್ಲಿ ಕಾನೂರಿನ ತೋಟ ವೊಂದರಲ್ಲಿ ಕಾರ್ಮಿಕರಾಗಿರುವ ಈ ಮಕ್ಕಳ ಪೋಷಕರಿಗೆ ಸುಳಿವು ಲಭಿಸಿದೆ.

ಇಲಾಖೆಯ ಸಿಬ್ಬಂದಿ ಅಲ್ಲಿ ತೆರಳಿ ವಿಚಾರಿಸಲಾಗಿ, ಸಮರ್ಪಕ ಮಾಹಿತಿ ಲಭಿಸದೆ, ಮತ್ತೆ ಹುಡುಕಾಟದಲ್ಲಿ ತೊಡಗಿದ ವೇಳೆ, ಗೋಣಿಕೊಪ್ಪಲುವಿನ ಕಿತ್ತಳೆ ಸಂಸ್ಕರಣಾ ಘಟಕ ಬಳಿ ಮೂವರು ಮಕ್ಕಳಿದ್ದ ಬಗ್ಗೆ ಸಾರ್ವಜನಿಕರು ಗೋಣಿಕೊಪ್ಪಲು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಆ ಮೇರೆಗೆ ಪೊಲೀಸರೊಂದಿಗೆ ಇಲಾಖಾ ಸಿಬ್ಬಂದಿ ಕೈಕೇರಿ ಬಳಿ ದೌಡಾಯಿಸಿ ಅಲ್ಲೆಲ್ಲ ಸುತ್ತಾಡಿ, ಸುಸ್ತು ಹೊಡೆದು ಸಂಜೆ ವೇಳೆಗೆ ಅಮ್ಮತ್ತಿ ಸುತ್ತಮುತ್ತ ಸುಳಿದಾಡಿದರೂ ಏನೂ ಮಾಹಿತಿ ಲಭಿಸಿಲ್ಲವೆಂದು ಗೊತ್ತಾಗಿದೆ.

ಇಂದು ದಿನವಿಡೀ ಮಕ್ಕಳ ಹುಡುಕಾಟದಲ್ಲಿ ಮಹಿಳಾ ಪೊಲೀಸ್ ಸಹಾಯಕ ಠಾಣಾಧಿಕಾರಿ ವಾಣಿ, ಮಕ್ಕಳ ಇಲಾಖೆಯ ಚರಣ್ ಹಾಗೂ ಕಿರಣ್ ಮತ್ತು ವಾಹನ ಚಾಲಕ ವಾಸುದೇವ್ ತೊಡಗಿದ್ದು, ರಾತ್ರಿ ಬಹು ಹೊತ್ತಿನವರೆಗೆ ಅಮ್ಮತ್ತಿ ಹೊಸೂರಿನಲ್ಲಿ ಠಿಕಾಣಿ ಹೂಡಿದ್ದರೂ ಸುಳಿವು ಲಭಿಸಿಲ್ಲ.