ಸೋಮವಾರಪೇಟೆ,ಮೇ.11: ಮದುವೆ ಸಮಾರಂಭ ನಡೆಯುತ್ತಿದ್ದ ಸಭಾಂಗಣದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ಏರ್ಪಟ್ಟು, ಮಹಿಳೆ ಸೇರಿದಂತೆ ಐದು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಇಲ್ಲಿನ ಕೊಡವ ಸಮಾಜದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಹೊಡೆದಾಟ ಏರ್ಪಟ್ಟಿದ್ದು, ಸುನಂದ, ಎಂ.ಪಿ.ನಾಣಿಯಪ್ಪ, ಟಿ.ಜೆ. ಪ್ರಸನ್ನ, ಕುಶಾಲಪ್ಪ, ಸುಬ್ಬಯ್ಯ ಸೇರಿದಂತೆ ಐವರು ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮದುವೆಯಲ್ಲಿ ಭಾಗವಹಿಸಿದ್ದ ಪ್ರವೀಣ್, ಭವಿಷ್, ಮಾದಪ್ಪ ಸೇರಿದಂತೆ ಮತ್ತಿತರರು ಹಲ್ಲೆ ನಡೆಸಿದ ಆರೋಪಿಗಳಾಗಿದ್ದು, ಕೆಲವರನ್ನು ವಶಕ್ಕೆ ಪಡೆದಿರುವ ಪಟ್ಟಣದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಡಿಕೇರಿ ಸಮೀಪದ ಗಾಳಿಬೀಡು ಕೆ.ಬಾಡಗ ಗ್ರಾಮದ ವಧು ಹಾಗೂ ಗರ್ವಾಲೆ ಸಮೀಪದ ಮಂಕ್ಯಾ ಗ್ರಾಮದ ವರನ ಮದುವೆ ಸಮಾರಂಭ ಇಂದು ನಡೆದಿತ್ತು. ಮಹೂರ್ತ ಮುಗಿದು ಸಂಜೆ ನೀರು ತರುವ ಶಾಸ್ತ್ರದ ಸಂದರ್ಭ, ಸಂಪ್ರದಾಯದಂತೆ ಹುಡುಗಿ ತಡೆದು ಕುಣಿಯುವ ಸಂದರ್ಭ ಗಲಾಟೆ ಪ್ರಾರಂಭವಾಗಿದೆ.

ಪಾನಮತ್ತರಾಗಿದ್ದ ಯುವಕರ ನಡುವೆ ಮಾರಾಮಾರಿ ನಡೆದು, ಕುರ್ಚಿಯಲ್ಲೇ ಬಡಿದಾಡಿ ಕೊಂಡಿದ್ದಾರೆ. ಕೆಲವರ ಮುಖದಲ್ಲಿ ರಕ್ತ ಚಿಮ್ಮುತ್ತಿದ್ದರೂ, ಬಡಿದಾಟ ಮುಂದುವರಿದಿದೆ. ಕ್ಷಣಾರ್ಧದಲ್ಲೆ ಕೊಡವ ಸಮಾಜ ರಣರಂಗವಾಗಿ ಅಲ್ಲಲ್ಲಿ ರಕ್ತ ಬಿದ್ದಿದೆ.

ತಡೆಯಲು ಹೋದ ಮಹಿಳೆಯರ ಮೇಲೂ ಹಲ್ಲೆ ನಡೆದಿದೆ. ಪೊಲೀಸರ ಆಗಮನ ಸ್ವಲ್ಪ ವಿಳಂಬವಾದ ಹಿನ್ನೆಲೆ ರಸ್ತೆಯಲ್ಲೂ ಬಡಿದಾಡಿಕೊಂಡಿದ್ದಾರೆ. ರಸ್ತೆಯಲ್ಲಿ ನಿಂತವರಿಗೂ ಪಾನಮತ್ತ ಯುವಕರು ಹಲ್ಲೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ ಸಂದರ್ಭ ಹಲ್ಲೆಕೋರರು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಇವರನ್ನು ಅಟ್ಟಿಕೊಂಡು ಹೋದ ಸಾರ್ವಜನಿಕರು ಆರೋಪಿಗಳಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.