ಸೋಮವಾರಪೇಟೆ, ಮೇ 11: ವೀರಾಜಪೇಟೆಯ ದಿಡ್ಡಳ್ಳಿಯಿಂದ ಸೋಮವಾರಪೇಟೆ ತಾಲೂಕಿನ ಬ್ಯಾಡಗೊಟ್ಟ ಗ್ರಾಮಕ್ಕೆ ಸ್ಥಳಾಂತರಿಸಿದ ಆದಿವಾಸಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸುವಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ವಿಫಲವಾಗಿದ್ದು, ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ರಾಜ್ಯ ಮತ್ತು ರಾಷ್ಟ್ರ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ದಿಡ್ಡಳ್ಳಿಯಲ್ಲಿ ನೆಲೆಕಂಡುಕೊಂಡಿದ್ದ ಆದಿವಾಸಿಗಳನ್ನು ಒಕ್ಕಲೆಬ್ಬಿಸಿ ಸೋಮವಾರಪೇಟೆಯ ಬ್ಯಾಡಗೊಟ್ಟ ಗ್ರಾಮದ ಬಯಲು ಪ್ರದೇಶಕ್ಕೆ ತಂದುಬಿಟ್ಟಿದ್ದು, ಇಲ್ಲಿ ಯಾವದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಇದರಿಂದಾಗಿ ಸಾವಿರಾರು ಮಂದಿ ಆದಿವಾಸಿಗಳು ಪ್ರಾಣಿಗಳಂತೆ ಬದುಕು ಸಾಗಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿರುವ ಅಭಿಮನ್ಯುಕುಮಾರ್, ತಕ್ಷಣ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಮನವಿ ಮಾಡಿದ್ದಾರೆ.

ಮಾನವ ಹಕ್ಕುಗಳ ಉಲ್ಲಂಘನೆ ಮಾಡಿ ಆದಿವಾಸಿ ಜನಾಂಗವನ್ನು ಸಮಸ್ಯೆ ತಳ್ಳಿದ ರಾಜ್ಯ ಸರ್ಕಾರದ ಪ್ರತಿನಿಧಿಗಳು, ಜಿಲ್ಲಾಡಳಿತ, ಮಂತ್ರಿಗಳ ವಿರುದ್ಧ ಮಾನವ ಹಕ್ಕುಗಳ ಕಾನೂನಿನಡಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಮಳೆ, ಗಾಳಿ, ಬಿಸಿಲಿನಿಂದ ಸಂರಕ್ಷಿಸುವ ಆಶ್ರಯ ತಾಣವನ್ನು ತಕ್ಷಣ ನಿರ್ಮಿಸಬೇಕು. ಸಮರ್ಪಕ ಆಹಾರ, ನೀರು ಶೌಚಾಲಯ, ವೈದ್ಯಕೀಯ ಸೇವೆ ಒದಗಿಸಬೇಕು. ಒಕ್ಕಲೆಬ್ಬಿಸುವ ಸಂದರ್ಭ ಕಳೆದುಕೊಂಡ ಹತ್ಯಾರು, ಸಾಮಗ್ರಿಗಳ ಹಣವನ್ನು ತಕ್ಷಣ ಆದಿವಾಸಿಗಳಿಗೆ ನೀಡಬೇಕು ಎಂದು ಅಭಿಮನ್ಯುಕುಮಾರ್ ಆಗ್ರಹಿಸಿದ್ದಾರೆ.