ಸೋಮವಾರಪೇಟೆ, ಮೇ 10: ಮತ್ಸ್ಯೋದ್ಯಮಕ್ಕೆ ಸೂಕ್ತವಾಗಿರುವ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಮೀನುಗಳು ಸಾವನ್ನಪ್ಪುತ್ತಿವೆ. ಕಳೆದೆರಡು ದಿನಗಳಿಂದ ಹಿನ್ನೀರಿನ ದಡಕ್ಕೆ ಮೀನುಗಳು ಅಪ್ಪಳಿಸುತ್ತಿದ್ದು, ನೀರಿನ ಇಳಿಮುಖವೇ ಮೀನುಗಳ ಸಾವಿಗೆ ಕಾರಣ ಎನ್ನಲಾಗಿದೆ.ಹಾರಂಗಿ ಜಲಾಶಯ ಪ್ರದೇಶದಲ್ಲಿ ಮೀನುಗಳನ್ನು ಹೆಚ್ಚಾಗಿ ಸಾಕಾಣಿಕೆ ಮಾಡಲಾಗುತ್ತಿದ್ದು, ಇದರ ಹಿನ್ನೀರು ಪ್ರದೇಶವಾದ ಯಡವಾರೆ, ಗರಗಂದೂರುವರೆಗೂ ನೀರಿನ ಸಂಗ್ರಹ ಇರುತ್ತದೆ. ಕಳೆದ ಕೆಲವಾರಗಳವರೆಗೂ ಮಳೆಬೀಳದ ಹಿನ್ನೆಲೆ ಹಿನ್ನೀರು ವ್ಯಾಪ್ತಿಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿ ಮೀನುಗಳು ಸಾವನ್ನಪ್ಪಿವೆ.

ಹಿನ್ನೀರು ಪ್ರದೇಶದಲ್ಲಿ ನೀರು ಕಡಿಮೆಯಾದಂತೆ ಕೆಲವೆಡೆ ಹೂಳು ತೆಗೆಯಲಾಗಿದ್ದು,

(ಮೊದಲ ಪುಟದಿಂದ) ಇದರಿಂದ ಹೊಂಡಗಳು ನಿರ್ಮಾಣವಾಗಿವೆ. ಹೆಚ್ಚು ನೀರು ಸಂಗ್ರಹವಿದ್ದಾಗ ಇಂತಹ ಹೊಂಡಗಳಲ್ಲಿ ವಾಸಿಸುವ ಮೀನುಗಳು, ನಂತರ ನೀರಿನ ಹರಿವು ಕಡಿಮೆಯಾದಂತೆ ಜಲಾಶಯದ ಸಂಪರ್ಕ ಕಡಿತಗೊಳ್ಳುತ್ತದೆ.

ಇದರಿಂದಾಗಿ ಹೊಂಡಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ, ಮೀನುಗಳಿಗೆ ಆಮ್ಲಜನಕದ ಕೊರತೆ ಉಂಟಾಗಿ ಈ ರೀತಿ ಸಾವನ್ನಪ್ಪುತ್ತವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನಿನ್ನೆ ಈ ಭಾಗದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆ ಸಮಸ್ಯೆ ಬಗೆಹರಿದಿದೆ ಎಂದು ಮೀನು ಕೃಷಿಕರು ಅಭಿಪ್ರಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಪ್ರತಿಕ್ರಿಯೆ ನೀಡಿರುವ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಅವರು, ಬೇಸಿಗೆಯಲ್ಲಿ ಈ ಸಮಸ್ಯೆ ಉದ್ಭವವಾಗುತ್ತದೆ. ಸ್ಥಳೀಯ ಮೀನು ಕೃಷಿಕರಿಗೆ ಮಾರ್ಚ್ ಮತ್ತು ಏಪ್ರಿಲ್‍ನಲ್ಲಿಯೇ ಮೀನು ಹಿಡಿಯುವಂತೆ ಸಲಹೆ ನೀಡಿರುತ್ತೇವೆ. ಮೀನುಗಳ ಇನ್ನೂ ಹೆಚ್ಚಿನ ಬೆಳವಣಿಗೆಯಾಗಲಿ ಎಂಬ ಉದ್ದೇಶದಿಂದ ಹಾಗೆಯೇ ಉಳಿಸಿಕೊಳ್ಳುತ್ತಾರೆ. ಹೊಂಡಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಬಿಸಿಲಿನ ತಾಪಕ್ಕೆ ಆಮ್ಲಜನಕದ ಕೊರತೆಯುಂಟಾಗಿ ಮೀನುಗಳು ಸಾವನ್ನಪ್ಪುತ್ತವೆ ಎಂದು ತಿಳಿಸಿದ್ದಾರೆ.

ಹೊಂಡಗಳಲ್ಲಿ ಉಳಿದಿರುವ ಮೀನುಗಳನ್ನು ತಕ್ಷಣ ಹಿಡಿಯುವಂತೆ ಕೃಷಿಕರಿಗೆ ಸಲಹೆ ನೀಡಿದ್ದೇವೆ. ಸುಮಾರು 500ಕ್ಕೂ ಅಧಿಕ ಗೆಂಡೆ ಮೀನುಗಳು ಸಾವನ್ನಪ್ಪಿರುವದಾಗಿ ತಿಳಿದುಬಂದಿದೆ ಎಂದು ಮಿಲನ ಭರತ್ ಮಾಹಿತಿ ನೀಡಿದ್ದಾರೆ.