ಸಿದ್ದಾಪುರ, ಮೇ 10: ರಾಜ್ಯ ಯುವಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕೆಂಪರಾಜು ಕೆ. ಗೌಡ ಅವರು ಮಡಿಕೇರಿಗೆ ಭೇಟಿ ನೀಡಿ ಮತ ಯಾಚಿಸಿದರು.
ರಾಜ್ಯ ಯುವ ಕಾಂಗ್ರೆಸ್ ಚುನಾವಣೆ ನಿಗದಿಯಾಗಿದ್ದು, ಜಿಲ್ಲೆ, ವಿಧಾನ ಸಭಾ ಕ್ಷೇತ್ರ ಸೇರಿದಂತೆ ರಾಜ್ಯ ಸಮಿತಿಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಕೆಂಪರಾಜು ಅವರು ಮಡಿಕೇರಿಗೆ ಆಗಮಿಸಿ ಯುವ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಮತ ಯಾಚಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದ ಅವರು, ತಾನು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎಲೆಮರೆ ಕಾಯಿಯಂತಿರುವ ಪಕ್ಷದ ಯುವ ಕಾರ್ಯಕರ್ತರನ್ನು ಮುಖ್ಯ ವಾಹಿನಿಗೆ ತರಲು ಶ್ರಮಿಸುವದಾಗಿ ತಿಳಿಸಿದರು. ಸರಕಾರದ ಕಾರ್ಯಕ್ರಮ ಹಾಗೂ ಯೋಜನೆಯನ್ನು ಪ್ರತಿ ಗ್ರಾಮಗಳಿಗೆ ತಲುಪಿಸಲು ಯುವ ಕಾಂಗ್ರೆಸ್‍ನ ಮೂಲಕ ಶ್ರಮಿಸುವದಾಗಿ ತಾ. 14, 15 ಹಾಗೂ 16 ರಂದು ಚುನಾವಣೆ ನಡೆಯಲಿದ್ದು, ಜಿಲ್ಲೆಯ ವಿವಿಧ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. ಈ ಸಂದರ್ಭ ಜಿಲ್ಲಾ ಅಧ್ಯಕ್ಷ ಅಭ್ಯರ್ಥಿ ಹನೀಫ್, ಜಿಲ್ಲಾ ಪ್ರ.ಕಾರ್ಯದರ್ಶಿ ಅಭ್ಯರ್ಥಿ ರೆಜಿತ್ ಕುಮಾರ್, ಕೆ.ಕೆ. ಹೂವಯ್ಯ, ಮಹಮ್ಮದ್ ಸಾಫಿ, ಯುವ ಕಾಂಗ್ರೆಸ್ ಮುಖಂಡ ನವೀದ್ ಖಾನ್ ಕಾಂಗ್ರೆಸ್ ಮುಖಂಡ ಖಾಲಿದ್, ವೀರಾಜಪೇಟೆ ಅಭ್ಯರ್ಥಿ ಅಂದ್ರಮಾನ್ ಸೇರಿದಂತೆ ಇನ್ನಿತರರು ಇದ್ದರು.