ಮಡಿಕೇರಿ, ಮೇ 11 :ಜಿಲ್ಲೆಯ ಯುವ ಜನತೆಯ ಕಾರ್ಯ ಚಟುವಟಿಕೆಗಳಿಗಾಗಿ ನಿರ್ಮಾಣಗೊಂಡಿರುವ, ಪ್ರಸ್ತುತ ಮಹಿಳಾ ಕಾಲೇಜು ನಡೆಯುತ್ತಿರುವ ನಗರದ ಜಿಲ್ಲಾ ಯುವ ಭವನವನ್ನು ಯುವ ಒಕ್ಕೂಟಕ್ಕೆ ಬಿಟ್ಟುಕೊಡದಿದ್ದಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವದಾಗಿ ಒಕ್ಕೂಟದ ಅಧ್ಯಕ್ಷ ಮಂಡುವಂಡ ಬಿ. ಜೋಯಪ್ಪ ಹಾಗೂ ಕಾರ್ಯದರ್ಶಿ ಪಿ.ಪಿ.ಸುಕುಮಾರ್ ತಿಳಿಸಿದ್ದಾರೆ.

ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿರುವ ಅವರು, ನಗರದ ಸುದರ್ಶನ ಅತಿಥಿ ಗೃಹದ ರಸ್ತೆ ಸಮೀಪವಿರುವ ಯುವ ಭವನದಲ್ಲಿ ಮಹಿಳಾ ಕಾಲೇಜು ನಡೆಯುತ್ತಿದ್ದು, ಮೇ ತಿಂಗಳ ಅಂತ್ಯದೊಳಗೆ ಭವನವನ್ನು ಬಿಟ್ಟುಕೊಡದಿದ್ದಲ್ಲಿ ಅನಿವಾರ್ಯವಾಗಿ ಧರಣಿ ನಡೆಸಬೇಕಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಯುವ ಭವನವನ್ನು ಬಿಟ್ಟುಕೊಡದೇ ಇರುವದರಿಂದ ಯುವ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಜಿಲ್ಲೆಯ ಯುವಕ, ಯುವತಿ ಮಂಡಳಿಗಳನ್ನು ಸದೃಢಗೊಳಿಸುವದು, ಯುವಜನತೆಗೆ ಮಾರ್ಗದರ್ಶನ ನೀಡುವದು, ವಿವಿಧ ತರಬೇತಿ ಮತ್ತು ಶಿಬಿರಗಳನ್ನು ಆಯೋಜಿಸುವದು, ಕಾರ್ಯಾಗಾರ, ಯುವ ಸಮ್ಮೇಳನ ಮತ್ತು ಯುವ ಜನರಿಗೆ ಸಂಬಂಧಪಟ್ಟ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶಕ್ಕಾಗಿ ಯುವಭವನ ನಿರ್ಮಾಣಗೊಂಡಿದೆ.

ಆದರೆ ಭವನವು ಯುವ ಒಕ್ಕೂಟಕ್ಕೆ ಲಭ್ಯವಾಗದೇ ಇರುವದರಿಂದ ಉದ್ದೇಶಿತ ಯೋಜನೆ ಅರ್ಥ ಕಳೆದುಕೊಂಡಿದೆ ಎಂದು ಮಂಡುವಂಡ ಬಿ.ಜೋಯಪ್ಪ ಹಾಗೂ ಪಿ.ಪಿ.ಸುಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಮೇ ತಿಂಗಳ ಅಂತ್ಯದೊಳಗೆ ಭವನವನ್ನು ಹಸ್ತಾಂತರಿಸದಿದ್ದಲ್ಲಿ ಜೂನ್ ಮೊದಲ ವಾರದಿಂದ ಧರಣಿ ಸತ್ಯಾಗ್ರಹವನ್ನು ಆರಂಭಿಸಲು ಜಿಲ್ಲಾ ಯುವ ಒಕ್ಕೂಟ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.