ಕೂಡಿಗೆ, ಮೇ 10: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಗ್ರಾಮದ ನಿವಾಸಿಗಳಿಗೆ ಕಾಯ್ದಿರಿಸಿದ್ದ ರುದ್ರಭೂಮಿ ಜಾಗವನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಒತ್ತುವರಿ ಮಾಡಿಕೊಂಡಿದೆ ಎಂದು ಆರೋಪಿಸಿ ಸುಂದರನಗರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿಯವರು ಸುಂದರನಗರ ಗ್ರಾಮಕ್ಕೆ ಸೇರಿದ 1.50 ಎರಕೆಯ ರುದ್ರಭೂಮಿ ಜಾಗ ಮತ್ತು ಇದಕ್ಕೆ ಹೊಂದಿಕೊಂಡಂತಿದ್ದ ಸರ್ವೆ ನಂ. 54/54ರ ಕೆರೆಯನ್ನು ಒತ್ತುವರಿ ಮಾಡಿಕೊಂಡು ಇದೀಗ ಹೊಸ ನಕ್ಷೆಯಲ್ಲಿ ಕೈಗಾರಿಕಾ ಪ್ರದೇಶಕ್ಕೆ ಸೇರಿದೆ ಎಂದು ಹೇಳುತ್ತಿದ್ದು, ಈ ಪ್ರದೇಶವನ್ನು ಖಾಸಗಿಯವರು ಖರೀದಿಸಿದ್ದಾರೆ. ಲಾರಿಯಿಂದ ಮಣ್ಣನ್ನು ತಂದು ಈ ಕೆರೆಯ ಜಾಗಕ್ಕೆ ಸುರಿದು ಸಮತಟ್ಟು ಮಾಡುತ್ತಿದ್ದಾರೆ. ಅಲ್ಲದೆ, ರುದ್ರಭೂಮಿ ಜಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸುಂದರನಗರದ ಗ್ರಾಮಸ್ಥರು ಆರೋಪಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಚರ್ಚೆ ಯಾಗಿ ರುದ್ರಭೂಮಿಗೆ ಕಾಯ್ದಿರಿಸಿದ ಜಾಗವೆಂದು ತೀರ್ಮಾನವಾಗಿದೆ. ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ಮನವಿ ಸಲ್ಲಿಸಲಾಗಿದೆ. ಆದರೆ, ಖಾಸಗಿಯವರು ಕೈಗಾರಿಕಾ ಘಟಕ ತೆರೆಯಲು ಕೆರೆ ಮತ್ತು ರುದ್ರಭೂಮಿಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ.

ಈ ಜಾಗವನ್ನು ಸುಂದರನಗರ ಗ್ರಾಮಸ್ಥರ ಸೌಕರ್ಯಕ್ಕೆ ಅನುವು ಮಾಡಿಕೊಡಬೇಕೆಂದು ಸಂಬಂಧ ಪಟ್ಟವರಿಗೆ ಪತ್ರ ವ್ಯವಹರಿಸ ಲಾಗಿದ್ದರೂ, ಖಾಸಗಿ ಘಟಕ ತೆರೆಯಲು ಮುಂದಾಗಿರುವ ವ್ಯಕ್ತಿಯು ಗ್ರಾಮಸ್ಥರಿಂದ ತೊಂದರೆಯಾಗುತ್ತಿದೆ ಎಂದು ದೂರು ನೀಡಿರುವ ಹಿನ್ನೆಲೆಯಲ್ಲಿ ಗ್ರಾಮದ ಸಾವಿರಾರು ಗ್ರಾಮಸ್ಥರು, ಮಹಿಳೆಯರು ಮತ್ತು ಪುರುಷರು ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಕೂಡು ಮಂಗಳೂರು ಗ್ರಾ.ಪಂ. ಸುಂದರನಗರ ವಾರ್ಡಿನ ಸದಸ್ಯರುಗಳಾದ ಜ್ಯೋತಿ ಪ್ರಮೀಳ, ಜಯಮ್ಮ, ಗ್ರಾ.ಪಂ. ಮಾಜಿ ಸದಸ್ಯೆ ಕಾವೇರಮ್ಮ, ಗ್ರಾಮದ ಪ್ರಮುಖರುಗಳಾದ ನಾಗಣ್ಣ, ಕಾವೇರಪ್ಪ, ರಾಜ, ಮಣಿ, ಸುಬ್ಬಯ್ಯ, ರಮೇಶ್ ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.