ಸೋಮವಾರಪೇಟೆ, ಮೇ 10: ಭಾರತೀಯ ಜನತಾ ಪಾರ್ಟಿಯ ವೈದ್ಯಕೀಯ ಪ್ರಕೋಷ್ಠದ ಆಶ್ರಯದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಒತ್ತಾಸೆಯ ಮೇರೆಗೆ ಸೋಮವಾರ ಪೇಟೆಯ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಕಲಚೇತನರ ಆರೋಗ್ಯ ತಪಾಸಣೆ ಮತ್ತು ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಯಶಸ್ವಿಯಾಯಿತು.
ತಾಲೂಕಿನ ಮೂಲೆಮೂಲೆ ಗಳಿಂದ ಆಗಮಿಸಿದ್ದ ವಿಕಲಚೇತನರು ಶಿಬಿರದ ಸಂಪೂರ್ಣ ಲಾಭ ಪಡೆದರಲ್ಲದೆ, ಕೆಲವರು ತಮ್ಮ ಆರೋಗ್ಯ ಕುರಿತು ವೈದ್ಯರಿಂದ ಸಲಹೆ ಸೂಚನೆ ಪಡೆದರು.
ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಕಲಚೇತನರು ತಮ್ಮ ಆರೋಗ್ಯ ತಪಾಸಣೆ ಮತ್ತು ಗುರುತಿನ ಚೀಟಿ ಪಡೆಯಲು ತಿಂಗಳುಗಟ್ಟಲೆ ಅಲೆಯುವದನ್ನು ತಪ್ಪಿಸಲು, ಎಲ್ಲಾ ವೈದ್ಯರು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಒಂದೇ ವೇದಿಕೆಯಡಿ ತಂದು ಸೌಲಭ್ಯ ಒದಗಿಲು ಶಿಬಿರ ಆಯೋಜಿಸಲಾಗಿದೆ ಎಂದರು. ಶಿಬಿರದಲ್ಲಿ ತಾಲೂಕಿನ ವಿವಿಧೆಡೆಗಳಿಂದ ಫಲಾನುಭವಿಗಳು ಆಗಮಿಸಿದ್ದು, ಎಲ್ಲಾ ರೀತಿಯ ವೈದ್ಯರನ್ನು ಕರೆತಂದಿದ್ದೇವೆ. ಸರ್ಕಾರದ ಸವಲತ್ತುಗಳನ್ನು ಪಡೆಯಲು ಅಂಗವಿಕಲರ ಗುರುತಿನ ಚೀಟಿ ಕಡ್ಡಾಯವಾಗಿದ್ದು, ಹಲವಷ್ಟು ಮಂದಿ ಮಡಿಕೇರಿಗೆ ತೆರಳಿ ಚೀಟಿ ಪಡೆಯಲು ಸಾಧ್ಯವಾಗದ ಹಿನ್ನೆಲೆ ಸ್ಥಳೀಯವಾಗಿಯೇ ಶಿಬಿರ ಆಯೋಜಿಸಿದ್ದಾಗಿ ತಿಳಿಸಿದರು.
ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾಧ್ಯಕ್ಷ ಡಾ. ನವೀನ್‍ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 8 ಸಾವಿರಕ್ಕೂ ಅಧಿಕ ಮಂದಿ ವಿಕಲಚೇತನರಿದ್ದು; ಹಲವಷ್ಟು ಮಂದಿ ಗುರುತಿನ ಚೀಟಿ ಪಡೆಯದೇ ಇರುವದರಿಂದ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದರು. ಇದನ್ನು ತಪ್ಪಿಸಲು ಬಿಜೆಪಿ ವೈದ್ಯಕೀಯ ಪ್ರಕೋಷ್ಠದಿಂದ ವಿನೂತನವೆಂಬಂತೆ ಇಂತಹ ಶಿಬಿರ ಆಯೋಜಿಸಲಾಗಿದ್ದು, ಎಲ್ಲೆಡೆ ಅಭೂತಪೂರ್ವ ಸ್ಪಂದನ ವ್ಯಕ್ತವಾಗಿದೆ. ಶೇ. 75ರಷ್ಟು ನ್ಯೂನ್ಯತೆ ಇದ್ದವರಿಗೆ ಮಾಸಿಕ ರೂ. 1200 ಹಾಗೂ ಅದಕ್ಕಿಂತ ಕೆಳಗಿರುವವರಿಗೆ ಮಾಸಿಕ ರೂ. 600 ಪಿಂಚಣಿ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಭಾರತೀಶ್, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರುಗಳು ಮಾತನಾಡಿದರು. ಅಧ್ಯಕ್ಷತೆಯನ್ನು ಬಿಜೆಪಿ ತಾಲೂಕು ಅಧ್ಯಕ್ಷ ಕೊಮಾರಪ್ಪ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಸದಸ್ಯೆ ತಂಗಮ್ಮ, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ, ಬಿಜೆಪಿ ಶಿಕ್ಷಕರ ಪ್ರಕೋಷ್ಠದ ಅಧ್ಯಕ್ಷ ಜೆ.ಸಿ. ಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಮೂಳೆ ತಜ್ಞರಾದ ಡಾ. ಶರತ್‍ಬಾಬು, ಪ್ರೊಫೆಸರ್ ಆಫ್ ಮೆಡಿಷನ್ ವೈದ್ಯ ಡಾ. ಲೋಕೇಶ್, ನೇತ್ರ ತಜ್ಞ ಕಿರಣ್ ಭಟ್, ಕಿವಿ ಮೂಗು ಗಂಟಲು ತಜ್ಞ ಡಾ. ಮಂಜುನಾಥ್ ಪ್ರಸಾದ್, ಮಾನಸಿಕ ತಜ್ಞ ವೈದ್ಯ ಡಾ. ರೂಪೇಶ್, ಡಾ. ನವೀನ್ ರೇ ಅವರುಗಳು ಭಾಗವಹಿಸಿ ತಪಾಸಣೆ ನಡೆಸಿದರು. ಶಿಬಿರದಲ್ಲಿ 200ಕ್ಕೂ ಅಧಿಕ ಮಂದಿ ವಿಕಲಚೇತನರಿಗೆ ಗುರುತಿನ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲಾಯಿತು. ಚನ್ನಬಸಪ್ಪ ಸಭಾಂಗಣದಲ್ಲಿ ವಿವಿಧ ವೈದ್ಯರು ಉಪಸ್ಥಿತರಿದ್ದು, ವಿಕಲಚೇತನರನ್ನು ತಪಾಸಣೆಗೆ ಒಳಪಡಿಸಿದರು.
ವೀಲ್ ಚೇರ್ ಸೇರಿದಂತೆ ಇತರ ಅಗತ್ಯ ವ್ಯವಸ್ಥೆಗಳನ್ನೂ ಆಯೋಜಕರು ಕಲ್ಪಿಸಿದ್ದರು. ಮಧ್ಯಾಹ್ನ ವಿಕಲಚೇತನ ಫಲಾನುಭವಿಗಳು, ಸಣ್ಣಪುಟ್ಟ ಸಮಸ್ಯೆ ಎದುರಿಸುತ್ತಿರುವ ರೋಗಿಗಳು, ಇವರುಗಳ ಪೋಷಕರುಗಳೂ ಸೇರಿದಂತೆ ಸಾವಿರಕ್ಕೂ ಅಧಿಕ ಮಂದಿಗೆ ಶಾಸಕರು ಊಟದ ವ್ಯವಸ್ಥೆ ಸೇರಿದಂತೆ ಇತರ ಸೌಲಭ್ಯ ಕಲ್ಪಿಸಿದ್ದುದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.