ಗೋಣಿಕೊಪ್ಪಲು, ಮೇ 11: ಸ್ವರ್ಣ ಭವನದಲ್ಲಿ ನಡೆದ ಬೇಸಿಗೆ ‘ಪೈಂಟಿಂಗ್’ ಶಿಬಿರದ ಸಮಾರೋಪ ನಡೆಯಿತು. ಮಕ್ಕಳು ತಯಾರಿಸಿದ ಪೈಟಿಂಗ್ ಹಾಗೂ ಕಲಾಕೃತಿಗಳ ಪ್ರದರ್ಶನ ನಡೆಯಿತು.

ಶಿಬಿರಾರ್ಥಿಗಳಾದ ಸಣ್ಣುವಂಡ ತ್ರಿಶಾ ಪೊನ್ನಮ್ಮ, ಸಾಕೇತ್, ಸಂಧ್ಯಾ, ಪುಷ್ಪ, ತಿಯಾನ, ನವೋದಿತ್, ನವನೀತ್ ಹಾಗೂ ತೇಜಸ್ ತಯಾರಿಸಿದ ಕಲಾಕೃತಿಗಳ ಪ್ರದರ್ಶನ ಮಾಡಿದರು.

ಕಲಾವಿದ ಸದಾನಂದ ಪುರೋಹಿತ್ ಅವರು ಶಿಬಿರಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿದರು. ಅತಿಥಿಗಳಾಗಿ ಚೇಂಬರ್ ಅಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಬಿ.ಎನ್. ಪ್ರಕಾಶ್, ಪತ್ರಕರ್ತ ಶ್ರೀಧರ್ ನೆಲ್ಲಿತ್ತಾಯ, ಚಿನ್ನ-ಬೆಳ್ಳಿ ವರ್ತಕರ ಸಂಘದ ಸ್ಥಾಪಕ ಗೌರವ ಅಧ್ಯಕ್ಷ ಎಂ.ಜಿ. ಮೋಹನ್, ಅಧ್ಯಕ್ಷ ಗಜಾನನ ಸೇಟ್ ಉಪಸ್ಥಿತರಿದ್ದರು. ಸದಾನಂದ ಪುರೋಹಿತ್ ಸ್ವಾಗತಿಸಿ, ವಂದಿಸಿದರು.

ಕೂಡಿಗೆ: ಬಾಲ ವಿಕಾಸ ಅಕಾಡೆಮಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳ ಲಾಗಿತ್ತು. 8 ರಿಂದ 15 ವರ್ಷದೊಳಗಿನ ಮಕ್ಕಳಿಗೆ 10 ದಿನಗಳ ಕಾಲ ನಡೆದ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯೆ ಶೀಲಾ, ಮಕ್ಕಳಿಗೆ ಈ ರೀತಿಯ ಶಿಬಿರಗಳು ನಡೆಯುವದರಿಂದ ಮಕ್ಕಳ ಪ್ರತಿಭೆಯು ಹೊರಹೊಮ್ಮಲು ಅನುಕೂಲವಾಗುತ್ತದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಲೀಲಾವತಿ ಮಾತನಾಡಿ, ವಿದ್ಯಾರ್ಥಿಗಳು ರಜೆಯ ಸದುಪಯೋಗದೊಂದಿಗೆ ಒಂದೆಡೆ ಸೇರುವದರ ಮೂಲಕ ಉತ್ತಮ ಮನೋಭಾವನೆ ಬೆಳೆಯುವದು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಶಂಕರಯ್ಯ, ಗಣೇಶ್, ಪ್ರಭಾಮಣಿ, ಮೀರಾ, ಗೀತಾ, ಮುಮ್ತಾಜ್, ಸಂಗೀತ, ನಾಗೇಶ್, ಮುರುಗೇಶ್, ಕುಮಾರ್, ರವಿ ಇವರುಗಳು ಶಿಬಿರದಲ್ಲಿ ಯೋಗ, ಹಾಡುಗಾರಿಕೆ, ನೃತ್ಯ, ಕಥೆ, ಕವನ ಹೇಳುವದು, ಚಿತ್ರಕಲೆ, ಪರಿಸರ ಕಾಳಜಿ, ಕರಕುಶಲವಸ್ತುಗಳ ಬಗ್ಗೆ ಹಾಗೂ ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ಶಿಬಿರದಲ್ಲಿ ಹಲವು ವಿಷಯಗಳ ಬಗ್ಗೆ ಪಡೆದ ಮಾಹಿತಿಗಳನ್ನು ಸಮಾರೋಪ ಸಮಾರಂಭದಲ್ಲಿ ಪೋಷಕರ ಮುಂದೆ ಪ್ರದರ್ಶಿಸಿದರು. ಶಿಬಿರಕ್ಕೆ ಮುಳ್ಳುಸೋಗೆ, ಕೂಡಿಗೆ, ಕೂಡುಮಂಗಳೂರು, ಕೂಡ್ಲೂರು ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಸಹಕಾರ ನೀಡಿದರು.