ಮಡಿಕೇರಿ, ಮೇ 15: ಅನ್ನಭಾಗ್ಯ ಯೋಜನೆಯಿಂದ ಅಕ್ಕಿ ಸಿಗುತ್ತಿದೆ; ಆದರೆ ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿಗೆ ಸೀಮೆಣ್ಣೆ ಅತ್ಯಗತ್ಯವಾಗಿದ್ದು, ಅದನ್ನು ಕೂಡ ಇಲ್ಲಿನ ಜನರಿಗೆ ಒದಗಿಸಲು ಸರ್ಕಾರ ಗಮನಹರಿಸ ಬೇಕು. ಕ್ಷೀರಭಾಗ್ಯ ಯೋಜನೆಯಡಿ ಹಾಲು ಸಿಗುತ್ತಿದೆ. ಅದರಂತೆ ಹಾಲಿನ ಜೊತೆಗೆ ಹಣ್ಣು ಸಿಕ್ಕರೆ ಮತ್ತಷ್ಟು ಉಪಯೋಗವಾಗಲಿದೆ. ಆದ್ದರಿಂದ ಹಾಲಿನೊಂದಿಗೆ ಹಣ್ಣನ್ನು ನೀಡಲು ಸರ್ಕಾರ ಮುಂದಾಗಲಿ ಎಂದು ಫಲಾನುಭವಿಗಳು ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರ ಬಳಿ ಮನವಿ ಮಾಡಿದರು.

ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರ 4 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆಗಳು ಜನ ಸಾಮಾನ್ಯರಿಗೆ ಸಮರ್ಪಕವಾಗಿ ತಲಪಿದೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕಾವೇರಿ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ‘ಜನಮನ' ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭ ವಿವಿಧ ಯೋಜನೆಗಳ ಫಲಾನುಭವಿ ಗಳು ತಮ್ಮ ಕೋರಿಕೆಗಳನ್ನು ಸಚಿವರೆದುರು ಮಂಡಿಸಿದರು.

ಅನ್ನಭಾಗ್ಯ

ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ 5 ಕೆ.ಜಿ. ನೀಡಲಾಗುತ್ತಿದ್ದ ಅಕ್ಕಿಯನ್ನು ಇದೀಗ 7 ಕೆ.ಜಿ.ಗೆ ಏರಿಕೆ ಮಾಡಲಾಗಿದೆ. ಇದು ಸ್ವಾಗತಾರ್ಹ. ಆದರೆ, ಕೊಡಗಿನಂತಹ ಮಲೆನಾಡು ಜಿಲ್ಲೆಯಲ್ಲಿ ಅಕ್ಕಿ ಸಿಕ್ಕರೆ ಪ್ರಯೋಜನವಾಗುವದಿಲ್ಲ. ಅಕ್ಕಿಯೊಂದಿಗೆ ಸೀಮೆಣ್ಣೆಯ ಅವಶ್ಯಕತೆಯೂ ಇದೆ ಎಂದು ಫಲಾನುಭವಿಗಳು ಹೇಳಿದರು.

‘ಗ್ಯಾಸ್ ಇದೆಯಲ್ಲಾ ಉಪಯೋಗಿಸಿಕೊಳ್ಳಿ' ಎಂದು ಸಚಿವರು ಹೇಳಿದಾಗ ‘ಸರ್, ಗ್ಯಾಸ್‍ನಿಂದ ಅಡುಗೆ ಮಾಡಬಹುದು ನಿಜ ಆದರೆ ದೀಪ ಉರಿಸಲು ಸಾಧ್ಯವಾಗುವದಿಲ್ಲ; ಮಳೆಗಾಲದಲ್ಲಿ ಆಗಿಂದಾಗ್ಗೆ ವಿದ್ಯುತ್ ಕೈ ಕೊಡುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಸೀಮೆಎಣ್ಣೆ ಇಲ್ಲವಾದರೆ ಕಷ್ಟವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಅಲ್ಪಸ್ವಲ್ಪವಾದರೂ ಸೀಮೆಎಣ್ಣೆ ಸಿಗುತ್ತದೆ. ಆದರೆ ನಗರವಾಸಿಗಳಿಗೆ ಕಿಂಚಿತ್ತೂ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ನಗರವಾಸಿಗಳಿಗೂ ಸೀಮೆಎಣ್ಣೆ ದೊರಕುವಂತೆ ಮಾಡಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಗ್ರಾಮೀಣ ಭಾಗದಲ್ಲಿ ನೀಡುವಂತೆ ನಗರ ವಾಸಿಗಳಿಗೂ ಸೀಮೆಎಣ್ಣೆ ವಿತರಿಸಲು ಕ್ರಮಕೈಗೊಳ್ಳುವಂತೆ ಆಹಾರ ಸಚಿವ ಯು.ಟಿ. ಖಾದರ್ ಅವರೊಂದಿಗೆ ಮಾತುಕತೆ ನಡೆಸುವದಾಗಿ ಭರವಸೆಯಿತ್ತರು.

ಕ್ಷೀರಭಾಗ್ಯ

ವಿವಿಧ ಶಾಲಾ ಮಕ್ಕಳು ಕ್ಷೀರಭಾಗ್ಯದ ಫಲಾನುಭವಿಗಳಾಗಿ ಸಂವಾದದಲ್ಲಿ ಪಾಲ್ಗೊಂಡರು. ವಾರಕ್ಕೆ 3 ದಿನ ಮಾತ್ರ ಹಾಲು ಕೊಡಲಾಗುತ್ತಿದ್ದು, ಅದನ್ನು ವಾರಪೂರ್ತಿ ಮುಂದುವರೆಸುವಂತೆ ಅವರುಗಳು ಆಗ್ರಹಿಸಿದರು. ಹಾಲಿನೊಂದಿಗೆ ಮೊಟ್ಟೆ ಅಥವಾ ಬಾಳೆಹಣ್ಣನ್ನು ವಿತರಿಸುವಂತಾಗಬೇಕು. ಹೀಗಾದಾಗ ನಮ್ಮ ಹಾಜರಾತಿಯು ಹೆಚ್ಚಾಗುವದಲ್ಲದೆ, ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯವೂ ವೃದ್ಧಿಯಾಗುತ್ತದೆ ಎಂದು ಮಕ್ಕಳು ಹೇಳಿದರು. ಇದಕ್ಕೆ ಉತ್ತರಿಸಿದ ಸಚಿವರು ವಾರದ 5 ದಿನವೂ ಶಾಲೆಗಳಲ್ಲಿ ಹಾಲು ವಿತರಿಸಲು ಈಗಾಗಲೇ ಸರ್ಕಾರ ತೀರ್ಮಾನಿಸಿದ್ದು, ಜೂನ್ ತಿಂಗಳಿನಿಂದ ಅದು ಜಾರಿಯಾಗಲಿದೆ ಎಂದರಲ್ಲದೆ ಹಾಲಿನೊಂದಿಗೆ ಬಾಳೆಹಣ್ಣನ್ನು ವಿತರಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವದೆಂದರು.

ಪಶುಭಾಗ್ಯ

ಪಶುಭಾಗ್ಯ ಯೋಜನೆಯಲ್ಲಿ ಪ್ರೋತ್ಸಾಹ ಧನ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಸಿಗುವಂತಹ ಪ್ರೋತ್ಸಾಹಧನ ಕಡಿಮೆಯಾಗಿದ್ದು, ಅದನ್ನು ಹೆಚ್ಚು ಮಾಡಿ. ಎಪಿಎಲ್ ಕಾರ್ಡ್‍ದಾರರು ಎಂಬ ಕಾರಣಕ್ಕಾಗಿ ಬಹಳಷ್ಟು ಸೌಲಭ್ಯಗಳು ಸಿಗುತ್ತಿಲ್ಲ. ಬಿಪಿಎಲ್ ಕಾರ್ಡ್‍ದಾರರಂತೆ ಎಪಿಎಲ್ ಫಲಾನುಭವಿಗಳಿಗೂ ಕೆಲ ಸೌಲಭ್ಯಗಳು ಸಿಗುವಂತಾಗಬೇಕು. ಹಿಂಡಿಯ ಬೆಲೆಯನ್ನು ಕಡಿಮೆಗೊಳಿಸಿ ಸುಲಭ ದರದಲ್ಲಿ ಹಿಂಡಿ ಕೈಗೆ ಸಿಗುವಂತಾಗಬೇಕು. ಹೀಗಾದಾಗ ಪಶುಭಾಗ್ಯ ಯೋಜನೆಯಡಿ ನಿರೀಕ್ಷಿತ ಫಲ ಸಿಗಲು ಸಾಧ್ಯ ಎಂದು ಪಶುಭಾಗ್ಯ ಯೋಜನೆಯ ಫಲಾನುಭವಿಗಳು ಹೇಳಿದರು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನಿಸುವದಾಗಿ ಸಚಿವ ಸೀತಾರಾಂ ಭರವಸೆಯಿತ್ತರು.

ಸರ್ಕಾರ ವಿವಿಧ ನಿಗಮಗಳಡಿ ಪಡೆದ ಸಾಲವನ್ನು ಮನ್ನಾ ಮಾಡಿದೆ. ಇದರಿಂದ ಬಡವರ ಬದುಕು ಹಸನುಗೊಳಿಸಿಕೊಳ್ಳಲು ಸಹಕಾರಿಯಾಯಿತು ಎಂದು ಫಲಾನುಭವಿಗಳು ಹೇಳಿದರು.

ಇದೇ ರೀತಿ ಮುಂದೆಯೂ ನಿಗಮಗಳಿಂದ ಸಾಲ ಸೌಲಭ್ಯ ಕಲ್ಪಿಸುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮನಸ್ವಿನಿ ಯೋಜನೆಯ ಫಲಾನುಭವಿಗಳು ಸರ್ಕಾರ ಮಾಸಿಕ 500 ರೂ. ಒದಗಿಸುತ್ತಿದೆ. ಇದನ್ನು ಒಂದು ಸಾವಿರಕ್ಕೆ ಹೆಚ್ಚಳ ಮಾಡಬೇಕು ಎಂದು ಫಲಾನುಭವಿಗಳು ಮನವಿ ಮಾಡಿದರು.

ಸಂವಾದದ ನಂತರ ಮಾತನಾಡಿದ ಸಚಿವ ಎಂ.ಆರ್. ಸೀತಾರಾಂ ಅವರು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳಲ್ಲಿ ಪ್ರಮುಖವಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೆರೆ ಸಂಜೀವಿನಿ, ಶುದ್ಧ ಕುಡಿಯುವ ನೀರಿನ ಘಟಕ, ವಿದ್ಯಾಸಿರಿ, ಬಿದಾಯಿ, ರಾಜೀವ್ ಆರೋಗ್ಯ ಭಾಗ್ಯ, ನಿರ್ಮಲ ಭಾಗ್ಯ, ಸಾಲ ಮುಕ್ತ, ಕೃಷಿ ಭಾಗ್ಯ, ಪಶುಭಾಗ್ಯ, ಹೀಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಈ ಮಹಾತ್ವಾಕಾಂಕ್ಷೆ ಕಾರ್ಯಕ್ರಮಗಳ ಪ್ರಯೋಜನ ಪಡೆದು ಆರ್ಥಿಕವಾಗಿ ಸಬಲರಾಗಬೇಕು. ಜೊತೆಗೆ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ಅವರು ಹೇಳಿದರು.

ವಾರ್ತಾಧಿಕಾರಿ ಚಿನ್ನಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರದ ಕಾರ್ಯಕ್ರಮಗಳ ಪ್ರಯೋಜನ ಪಡೆದ ಫಲಾನುಭವಿ ಗಳಿಂದ ಮುಕ್ತ ಅಭಿಪ್ರಾಯ, ಅನಿಸಿಕೆ ಪಡೆದು ಕಾರ್ಯಕ್ರಮಗಳ ಬದಲಾವಣೆ ಅಥವಾ ಸುಧಾರಣೆ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವದೇ ಫಲಾನುಭವಿಗಳೊಂದಿಗಿನ ಸಂವಾದದ ಉದ್ದೇಶವಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸರ್ಕಾರದ 4 ವರ್ಷದ ಸಾಧನೆಗೆ ಸಂಬಂಧಿಸಿದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಉಸ್ತುವಾರಿ ಕಾರ್ಯದರ್ಶಿ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ರೇವತಿ ರಮೇಶ್ ತಂಡದವರು ನಾಡಗೀತೆ ಹಾಡಿದರು. ವಾರ್ತಾಧಿಕಾರಿ ಚಿನ್ನಸ್ವಾಮಿ ಸ್ವಾಗತಿಸಿದರು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ವಿ.ಸುರೇಶ್ ನಿರೂಪಿಸಿ, ವಂದಿಸಿದರು.