ಕುಶಾಲನಗರ, ಮೇ 15: ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವದರೊಂದಿಗೆ ಹಲವು ಬೇಡಿಕೆಗಳ ಬಗ್ಗೆ ನಿರ್ಣಯ ಮಂಡಿಸಲಾಯಿತು. ಮುಂಬರುವ 2018 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳ ಪೈಕಿ 1 ಕ್ಷೇತ್ರದಲ್ಲಿ ಪಕ್ಷದಿಂದ ಅಲ್ಪಸಂಖ್ಯಾತರು ಸ್ಪರ್ಧಿಸಲು ಅವಕಾಶ ಕಲ್ಪಿಸುವದು, ವಿಧಾನ ಪರಿಷತ್‍ಗೆ ನಾಮನಿದೇರ್ಶಿತ ಸದಸ್ಯರನ್ನು ಆಯ್ಕೆ ಮಾಡುವ ಸಂದರ್ಭ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ಕಲ್ಪಿಸುವುದು, ನಿಗಮ ಮಂಡಳಿಗಳಲ್ಲಿ ಕೊಡಗು ಜಿಲ್ಲೆಯ ಅಲ್ಪಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತನನ್ನು ಅಧ್ಯಕ್ಷ ಹುದ್ದೆಗೆ ನೇಮಕಾತಿ ಮಾಡಬೇಕು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಜಿಲ್ಲೆಯ ಅಲ್ಪಸಂಖ್ಯಾತರಿಗೆ ಎರಡು ಸ್ಥಾನ ನೀಡುವದು, ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಮುಸಲ್ಮಾನರು ವಾಸವಾಗಿರುವದರಿಂದ ವಕ್ ಬೋರ್ಡ್ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವದು, 2015 ರಲ್ಲಿ ರಾಜ್ಯ ಸರಕಾರದ ಮೂಲಕ ಆಚರಿಸಲಾದ ಟಿಪ್ಪು ಜಯಂತಿ ಸಂದರ್ಭ ಅಮಾಯಕ ಮೇಲೆ ಹೂಡಿರುವ ಮೊಕದ್ದಮೆ ಹಿಂಪಡೆಯುವುದು ಈ ಎಲ್ಲಾ ಬೇಡಿಕೆಗಳನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಒತ್ತು ನೀಡುವಂತೆ ಆಗ್ರಹಿಸಲಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಎ.ಯಾಕೂಬ್ ತಿಳಿಸಿದ್ದಾರೆ.