ಮಡಿಕೇರಿ, ಮೇ 15: ಜಿಲ್ಲೆಯ 55 ಗ್ರಾಮಗಳನ್ನು ಸೂಕ್ಷ್ಮ ಅರಣ್ಯ ವಲಯಕ್ಕೆ ಸೇರಿಸಿರುವ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸ ಲಾಗುವದು ಎಂದು ಕೊಡಗು ಬಿಜೆಪಿ ಕಾರ್ಯಕಾರಿಣಿ ನಿರ್ಣಯ ಕೈಗೊಂಡಿದೆ. ಅಲ್ಲದೆ, ಕರ್ನಾಟಕ ರಾಜ್ಯ ಸರಕಾರ, ಉತ್ತರ ಪ್ರದೇಶ ಸರಕಾರದಂತೆ ಇಲ್ಲಿಯೂ ರೈತರ ಸಾಲಮನ್ನಾ ಮಾಡುವಂತೆ ಆಗ್ರಹ ಪೂರ್ವಕ ನಿರ್ಣಯ ಕೈಗೊಂಡಿದೆ.

ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿ.ಕೆ. ಲೋಕೇಶ್ ಮಂಡಿಸಿದ ಈ ಎರಡು ನಿರ್ಣಯಗಳನ್ನು ಕಾರ್ಯ ಕಾರಿಣಿ ಸಭೆ ಅನುಮೋದಿಸಿತು. ಸಭೆಗೆ ಚಾಲನೆ ನೀಡಿದ ಕೊಡಗು ಬಿಜೆಪಿ ಉಸ್ತುವಾರಿ ಹಾಗೂ ಉಡುಪಿ ಜಿಲ್ಲೆಯ ಮಾಜಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಿಜೆಪಿ ಸರಕಾರ ಹಾಗೂ ರಾಜ್ಯ ಕಾಂಗ್ರೆಸ್ ಸರಕಾರದ ನಡುವೆ ಜನತೆ ತುಲನಾತ್ಮಕ ಮಾಹಿತಿಯತ್ತ ಗಮನಿಸುತ್ತಿರುವದಾಗಿ ನುಡಿದರು.

ಕೇಂದ್ರ ಸರಕಾರ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದರೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು, ಭ್ರಷ್ಟಾಚಾರದಲ್ಲಿ ಮೊದಲನೆಯ ಸ್ಥಾನದಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದೆ ಎಂದು ಟೀಕಿಸಿದರು. 2018ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯೊಂದಿಗೆ ಬಹುಮತ ಸಾಧಿಸಲು ಈಗಿನಿಂದಲೇ ಕಾರ್ಯಕರ್ತರು ಶ್ರಮಿಸಲು ಕರೆ ನೀಡಿದ ಅವರು, 2019ರ ಲೋಕಸಭಾ ಚುನಾವಣೆ ವೇಳೆಗೆ ರಾಜ್ಯದ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಗುರಿ ಬಿಜೆಪಿಯದ್ದಾಗಿದೆ ಎಂದರು.

ಬಡವರ ಕಲ್ಯಾಣ ವರ್ಷ : ಪಂಡಿತ ದೀನ ದಯಾಳ್ ಉಪಾಧ್ಯಾಯರ ಜನ್ಮಶತಾಬ್ಧಿ ವರ್ಷವನ್ನು ಕೇಂದ್ರ ಸರಕಾರವು ಬಡವರ ಕಲ್ಯಾಣಕ್ಕಾಗಿ ‘ಗರೀಬಿ ಕಲ್ಯಾಣ ವರ್ಷ’ ಎಂದು ಘೋಷಿಸಿದ್ದು, ಪಕ್ಷದ ಎಲ್ಲಾ ಕಾರ್ಯಕರ್ತರು ಕೇಂದ್ರದ ಸಾಧನೆ ಬಗ್ಗೆ ಮನೆ ಮನೆ ಸಂದೇಶದೊಂದಿಗೆ 15 ದಿವಸಗಳಂತೆ ಕಡ್ಡಾಯ ಕೆಲಸ ಮಾಡಲು ನಿರ್ಧರಿಸಿರುವದಾಗಿ ಉದಯಕುಮಾರ್ ಶೆಟ್ಟಿ ವಿವರಿಸಿದರು.

ಸಂಘಟನೆಗೆ ಒತ್ತು : ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಮಾತನಾಡಿ, ಗ್ರಾಮ ಮಟ್ಟ ಅಥವಾ ಬೂತ್ ಹಂತದಿಂದ ಪಕ್ಷ ಸಂಘಟಿಸುವಲ್ಲಿ ಸಮಿತಿಗಳ ರಚನೆಗೆ ಸೂಚಿಸಿದರು. ತಳಮಟ್ಟದಿಂದ ಸಮಿತಿಗಳ ರಚನೆಯೊಂದಿಗೆ ಕಾರ್ಯಕರ್ತರನ್ನು ಸದೃಢ ಗೊಳಿಸುವದರಿಂದ ಮಾತ್ರ ಬಿಜೆಪಿ -150 ಗುರಿ ಮುಟ್ಟುವದು ಸಾಧ್ಯವೆಂದು ಕಿವಿಮಾತು ಹೇಳಿದರು.

ಗಮನಕ್ಕೆ ತನ್ನಿ : ಮಡಿಕೇರಿ ಹಾಗೂ ವೀರಾಜಪೇಟೆ ಎರಡು ವಿಧಾನ ಸಭಾ ಕ್ಷೇತ್ರಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳು, ಲೋಕಸಭಾ ಕ್ಷೇತ್ರ ಕೂಡ ಬಿಜೆಪಿ ಹಿಡಿತದಲ್ಲಿದ್ದು, ಕೊಡಗಿನಲ್ಲಿ ಪಕ್ಷ ಸಂಘಟನೆ ಬಲಿಷ್ಠವಿರುವಾಗ, ಯಾವದೇ ಗೊಂದಲಕ್ಕೆ ಎಡೆಯಾಗದಂತೆ ಜಿಲ್ಲೆಯ ಪ್ರಮುಖರ ಗಮನಕ್ಕೆ ತಂದು, ರಾಜ್ಯದಿಂದ ತೀರ್ಮಾನಗಳನ್ನು ಕೈಗೊಳ್ಳುವಂತೆ ಶಾಸಕ ಕೆ.ಜಿ. ಬೋಪಯ್ಯ ಸಲಹೆ ನೀಡಿದರು.

ಒಗ್ಗಟ್ಟಿನಿಂದ ಸಾಗೋಣ : ಇನ್ನೋರ್ವ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಯುವ ಅಧ್ಯಕ್ಷರ ಮುಂದಾಳತ್ವದಲ್ಲಿ ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಸಮಾಜದ ಎಲ್ಲಾ ವರ್ಗದ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿಯ ಏಳಿಗೆಗಾಗಿ ಒಗ್ಗಟ್ಟಿನಿಂದ ಸಾಗೋಣ ಎಂದು ಕರೆ ನೀಡಿದರು.

ಹಿಂದಿನ ಕಷ್ಟವಿಲ್ಲ : ಒಂದೊಮ್ಮೆ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಹಿರಿಯರು ಅನುಭವಿಸಿದ ಕಷ್ಟ ಈಗ ಇಲ್ಲವೆಂದು ನೆನಪಿಸಿದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಇಂದು ಎಲ್ಲರೊಂದಿಗೆ ಹೊಂದಿಕೊಂಡು ತಪ್ಪು ಒಪ್ಪುಗಳ ತಿದ್ದಿಕೊಂಡು ಪಕ್ಷವನ್ನು ಬಲಿಷ್ಠಗೊಳಿಸುತ್ತಾ, ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಪಂಡಿತ ದೀನದಯಾಳ್ ವಿಚಾರಧಾರೆಯ ಕುರಿತು ಬಿಜೆಪಿ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ ಮಾತನಾಡಿದರು. ಕಾಫಿ ಮಂಡಳಿ ಸದಸ್ಯರಾದ ಜಿ.ಎಲ್. ನಾಗರಾಜ್ ಹಾಗೂ ಬೊಟ್ಟಂಗಡ ರಾಜು ಅವರುಗಳು, ಪಕ್ಷದೊಳಗೆ ಗೊಂದಲಕ್ಕೆ ಅವಕಾಶವಾಗದಂತೆ ನಾಯಕರು ಗಮನವಿಡಬೇಕೆಂದು ಒತ್ತಾಯಿಸಿದರು. ಬಿಜೆಪಿ ಕಾರ್ಯಕಾರಿಣಿ ಸಭೆಯ ಬಳಿಕ ಪಕ್ಷದ ಪ್ರಮುಖರೊಂದಿಗೆ ರಾಜ್ಯ ನಾಯಕರು ಪ್ರತ್ಯೇಕ ಸಮಾಲೋಚನೆ ನಡೆಸಿ, ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕೆಂದು ಪದಾಧಿಕಾರಿಗಳಿಗೆ ತಾಕೀತು ಮಾಡಿದರು.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಬಿ. ಭಾರತೀಶ್ ಹಾಗೂ ನಾಯಕರುಗಳಲ್ಲದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೀನಾ ಪ್ರಕಾಶ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮೊದಲಾದವರು ವೇದಿಕೆಯಲ್ಲಿದ್ದರು.

ಸಾಂಸ್ಕøತಿಕ ಪ್ರಕೋಷ್ಠದ ಭಾರತಿ ರಮೇಶ್ - ಪ್ರತಿಭಾ ವಂದೇಮಾತರಂ ನೊಂದಿಗೆ, ಕಾರ್ಯದರ್ಶಿ ಬಾಲಚಂದ್ರಕಳಗಿ ನಿರೂಪಿಸಿದರು. ಪಕ್ಷದ ಹಾಲಿ ಮತ್ತು ಮಾಜಿ ಪದಾಧಿಕಾರಿಗಳು, ಜಿ.ಪಂ., ತಾ.ಪಂ. ನಗರಸಭೆ ಪಟ್ಟಣ ಪಂಚಾಯಿತಿ ಹಾಗೂ ಗ್ರಾ.ಪಂ. ಪ್ರಮುಖರು, ವಿವಿಧ ಮೋರ್ಚಾ, ಪ್ರಕೋಷ್ಠಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಕಾರ್ಯದರ್ಶಿ ಕಾಂತಿ ಸತೀಶ್ ಸ್ವಾಗತಿಸಿ, ಲೋಕೇಶ್ ವಂದಿಸಿದರು.